ಶಿವಮೊಗ್ಗ (shivamogga), ಸೆಪ್ಟೆಂಬರ್ 30: ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸುಳ್ಳು ಭರವಸೆ ನೀಡಿ ವಾಟರ್ ಪ್ಯೂರಿಫೈಯರ್ ಮಾರಾಟ ಮಾಡಿ, ಹಣ ವಾಪಸ್ ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದ ಕಂಪನಿ ಹಾಗೂ ಅದರ ಡಿಸ್ಟ್ರಿಬ್ಯೂಟರ್‌ಗಳು ತಕ್ಷಣವೇ ಗ್ರಾಹಕನಿಗೆ ಸೂಕ್ತ ಪರಿಹಾರ ನೀಡುವಂತೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಶಿವಕುಮಾರ ಹಂಪಳ್ಳಿ ಎಂಬುವರು ದಿನಾಂಕ 12/06/2024 ರಂದು ಕಂಪನಿಯೊಂದರ ಶಿವಮೊಗ್ಗ ಹಾಗೂ ಮೈಸೂರಿನ ಡಿಸ್ಟ್ರಿಬ್ಯೂಟರ್‌ಗಳ ಮೂಲಕ 2,77,000 ರೂ. ನೀಡಿ ವಾಟರ್ ಪ್ಯೂರಿಫೈಯರ್ ಖರೀದಿಸಿದ್ದರು.
‘ಈ ಯಂತ್ರದ ನೀರನ್ನು ಒಂದು ತಿಂಗಳು ಉಪಯೋಗಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಯಂತ್ರವನ್ನು ವಾಪಸ್ ಪಡೆದು ಹಣ ಹಿಂದಿರುಗಿಸಲಾಗುವುದು’ ಎಂದು ಗ್ರಾಹಕರಿಗೆ ಭರವಸೆ ನೀಡಲಾಗಿತ್ತು.
ಆದರೆ ದೂರುದಾರರು ನೀರು ಬಳಸಿದ ನಂತರ ವೈದ್ಯಕೀಯ ತಪಾಸಣೆ ಮಾಡಿಸಿದಾಗ, ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗದೆ ಹೆಚ್ಚಾಗಿತ್ತು. ಈ ಬಗ್ಗೆ ಎದುರುದಾರರನ್ನು ಸಂಪರ್ಕಿಸಿದಾಗ, ಅವರು ಯಂತ್ರ ವಾಪಸ್ ಪಡೆದು ಪೂರ್ತಿ ಹಣ ನೀಡುವ ಬದಲು ಕೇವಲ 12,350 ರೂ. ಮಾತ್ರ ಜಮಾ ಮಾಡಿದ್ದರು.
ಉಳಿದ ಹಣಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಹಾಗೂ ನೋಟೀಸ್ ನೀಡಿದರೂ ಸ್ಪಂದಿಸದ ಕಾರಣ, ದೂರುದಾರರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು: ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಕಂಪನಿಯು ನೀಡಿರುವ ಭರವಸೆಯಂತೆ ನಡೆದುಕೊಳ್ಳದೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ.
ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಈ ಕೆಳಗಿನಂತೆ ಆದೇಶಿಸಿದೆ:
‘ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ. 2,64,650 ರೂ. ಗಳನ್ನು ಆದೇಶವಾದ 45 ದಿನಗಳ ಒಳಗೆ ವಾಪಸ್ ನೀಡಬೇಕು. ತಪ್ಪಿದ್ದಲ್ಲಿ ಶೇ. 9 ರ ಬಡ್ಡಿಯೊಂದಿಗೆ ಪಾವತಿಸಬೇಕು.
ಮಾನಸಿಕ ವೇದನೆಗಾಗಿ 30,000 ರೂ. ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ 10,000 ರೂ.ಗಳನ್ನು ಆದೇಶವಾದ 45 ದಿನಗಳ ಒಳಗೆ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಶೇ. 10 ರ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕು ಎಂದು ಆದೇಶಿಸಿದೆ.
Shivamogga: Water Purifier Company and Distributors Ordered to Refund Customer!
Shivamogga, September 30: The Shivamogga District Consumer Disputes Redressal Commission has issued a significant order directing a water purifier company and its distributors to immediately provide appropriate compensation to a customer. The company had committed a deficiency in service by selling the purifier based on false promises that it would reduce cholesterol levels and subsequently failing to refund the money.

