shimoga news | ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾವಹಿಸಲು ‘ಅಕ್ಕ ಪಡೆ’ಗೆ ಶಿವಮೊಗ್ಗ ಎಸ್ಪಿ ಸೂಚನೆ!

Shivamogga SP instructs ‘Akka Pade’ to keep a watch on suspicious individuals! | Shivamogga, October 22: District Superintendent of Police Nikhil B. has directed the personnel of ‘Akka Pade’—a unit dedicated to the safety - protection and empowerment of women and children—to visit various taluks and raise greater awareness.

ಶಿವಮೊಗ್ಗ (shivamogga), ಅಕ್ಟೋಬರ್ 22: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿರುವ ‘ಅಕ್ಕಪಡೆ’ ಸಿಬ್ಬಂದಿಗಳು, ತಾಲೂಕುಗಳಿಗೆ ಭೇಟಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಸೂಚಿಸಿದ್ದಾರೆ.

ಅಕ್ಟೋಬರ್ 22 ರಂದು ಎಸ್ ಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಅಕ್ಕ ಪಡೆ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯ (ಜುಲೈ – ಸೆಪ್ಟೆಂಬರ್ 2026)ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಕ್ಕ ಪಡೆ’ಯ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮುಂದುವರೆದಿದ್ದು, ಕಾರ್ಯಾಚರಣೆ ಕೇವಲ ನಗರ ಪ್ರದೇಶಕ್ಕೆ ಸೀಮಿತಗೊಳ್ಳದೆ, ತಾಲ್ಲೂಕುಗಳ ಹಳ್ಳಿಗಳಿಗೂ ತೆರಳಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲು ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳ ರಿಜಿಸ್ಟರ್‌ಗಳನ್ನು ತಪಾಸಣೆ ಮಾಡಲು ಹಾಗೂ ಅಪರಿಚಿತ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ವಹಿಸಬೇಕು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಐ.ಇ.ಸಿ  ಕಾರ್ಯಕ್ರಮಗಳ ಸಹಯೋಗದೊಂದಿಗೆ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ಹಾಗೂ ಇತರೆ ಸಂಕಷ್ಟಗಳಿಗೆ ಒಳಗಾದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿ ‘ಸಖಿ’ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ದಾಖಲಿಸಲು ಸೂಚಿಸಿದರು.

ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚಿನ ಕರೆಗಳು ಬಂದ ಸ್ಥಳಗಳು ಮತ್ತು ಹಾಟ್‌ಸ್ಪಾಟ್  ಪ್ರದೇಶಗಳನ್ನು ಗುರುತಿಸಿ, ಆಯಾ ಸ್ಥಳಗಳಿಗೆ ಭೇಟಿ ನೀಡುವಂತೆ  ಹೇಳಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಈ ಸಮಗ್ರ ಜಾಗೃತಿ ಹಾಗೂ ರಕ್ಷಣಾ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಪ್ರಗತಿ ವರದಿಯ ಮುಖ್ಯಾಂಶಗಳು : ವರದಿ ಅವಧಿಯಲ್ಲಿ ಅಕ್ಕ ಪಡೆ ತಂಡವು ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ನೂರಾರು ಭೇಟಿಗಳನ್ನು ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.

ಅಕ್ಕ ಪಡೆಯು ಜುಲೈ ಯಿಂದ ಸೆಪ್ಟೆಂಬರ್ ವರೆಗೆ ಶಾಲೆ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ, ಉದ್ಯಾನ,ಹೋಟೆಲ್, ಮಾರ್ಕೆಟ್ ಹೀಗೆ 1158 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಹಾಗೂ ಮಹಿಳಾ ಸಂಬಂಧಿತ 83 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.

ಭಿಕ್ಷಾಟನೆ, ಕೌಟುಂಬಿಕ ದೌರ್ಜನ್ಯ, ಬಾಲ ಕಾರ್ಮಿಕ, ಅನಾಥ, ನಿರ್ಗತಿಕ ಸೇರಿದಂತೆ ವಿವಿಧ ರಕ್ಷಣಾ ಕಾರ್ಯಗಳಲ್ಲಿ 685 ರೆಸ್ಕ್ಯೂ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಕ್ಕ ಪಡೆ ಮಾಹಿತಿ ನೀಡಿದೆ.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಡಿಡಿಪಿಯು, ಡಿಡಿಪಿಐ, ಸಮಾಜ‌ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು‌.

Shivamogga SP instructs ‘Akka Pade’ to keep a watch on suspicious individuals! | Shivamogga, October 22: District Superintendent of Police Nikhil B. has directed the personnel of ‘Akka Pade’—a unit dedicated to the safety – protection and empowerment of women and children—to visit various taluks and raise greater awareness.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *