ಹೊಳೆಹೊನ್ನೂರು, ಆನವಟ್ಟಿ ಪಟ್ಟಣ ಪಂಚಾಯ್ತಿ ಚುನಾವಣೆ ನೆನೆಗುದಿಗೆ!

Holehonur Anavatti Pattana Panchayat elections are scheduled! ಹೊಳೆಹೊನ್ನೂರು ಆನವಟ್ಟಿ ಪಟ್ಟಣ ಪಂಚಾಯ್ತಿ ಚುನಾವಣೆ ನೆನೆಗುದಿಗೆ! ಸಾಗರ ನಗರಸಭೆ ಶಿಕಾರಿಪುರ ಶಿರಾಳಕೊಪ್ಪ ಸೊರಬ ಪುರಸಭೆ ಹೊಸನಗರ ಜೋಗಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ವಿಳಂಬ!!

ಶಿವಮೊಗ್ಗ, ನ. 16: ಶಿವಮೊಗ್ಗ ಜಿಲ್ಲೆಯ ಕೆಲ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಇದರಿಂದ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ!

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹಾಗೂ ಆನವಟ್ಟಿ ಗ್ರಾಮ ಪಂಚಾಯ್ತಿಗಳನ್ನು 2021 ರಲ್ಲಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ತದನಂತರ 2022 ರಲ್ಲಿ ನೂತನ ಪಟ್ಟಣ ಪಂಚಾಯ್ತಿಗಳ ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಿ, ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ವಾರ್ಡ್ ಮೀಸಲಾತಿ ನಿಗದಿಗೊಳಿಸಿ, ಚುನಾವಣೆ ನಡೆಸಬೇಕಾಗಿತ್ತು.

ಆದರೆ ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಿ ಒಂದು ವರ್ಷ ಕಳೆದರೂ ಇಲ್ಲಿಯವರೆಗೂ ವಾರ್ಡ್ ಮೀಸಲಾತಿ ನಿಗದಿಗೊಳಿಸಿ, ಚುನಾವಣೆ ನಡೆಸುವ ಪ್ರಕ್ರಿಯಾಗಿಲ್ಲ. ಜನಪ್ರತಿನಿಧಿಗಳ ಆಡಳಿತ ಆರಂಭವಾಗಿಲ್ಲ.

ವಿಳಂಬ : ಮತ್ತೊಂದೆಡೆ ಸರಿಸುಮಾರು ಒಂದು ವರ್ಷದಿಂದ ಸಾಗರ ನಗರಸಭೆ, ಶಿಕಾರಿಪುರ,  ಶಿರಾಳಕೊಪ್ಪ, ಸೊರಬ ಪುರಸಭೆ, ಹೊಸನಗರ, ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯೂ ನಡೆದಿಲ್ಲ!

ರಾಜ್ಯ ಸರ್ಕಾರ ಇಲ್ಲಿಯವರೆಗೂ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಿಲ್ಲ. ಇದರಿಂದ ಕಳೆದೊಂದು ವರ್ಷದಿಂದ ಸದರಿ ಸ್ಥಳೀಯಾಡಳಿತಗಳಲ್ಲಿ ಅಧ್ಯಕ್ಷ – ಉಪಾಧ್ಯಕ್ಷರೇ ಇಲ್ಲದಂತಾಗಿದೆ.

ಗಮನಿಸಲಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆ ಸಚಿವರ ಜೊತೆ ಸಮಾಲೋಚಿಸಿ, ಕಾಲಮಿತಿಯೊಳಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆದ್ಯ ಗಮನಹರಿಸಬೇಕಾಗಿದೆ.

*** ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ‍್ ಅವರು ನಿಗದಿತ ಅವಧಿಯೊಳಗೆ ಶಿವಮೊಗ್ಗ, ತುಮಕೂರು, ಮೈಸೂರು ಮಹಾನಗರ ಪಾಲಿಕೆಗಳ ವಾರ್ಡ್ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಲಭ್ಯ ಮಾಹಿತಿ ಅನುಸಾರ ಇಲ್ಲಿಯವರೆಗೂ ಚುನಾವಣೆಯ ಪೂರ್ವಭಾವಿ ಸಿದ್ದತೆಗಳೇ ಆರಂಭವಾಗಿಲ್ಲ!

ಪ್ರಸ್ತುತ ತಿಂಗಳು ಶಿವಮೊಗ್ಗ ಪಾಲಿಕೆಯ ಹಾಲಿ ಸದಸ್ಯರ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಈ ವೇಳೆಗಾಗಲೇ ವಾರ್ಡ್ ವಾರು ಮೀಸಲಾತಿ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತೀತರ ಕೆಲಸಕಾರ್ಯಗಳು ಆರಂಭವಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಇವ್ಯಾವ ಪ್ರಕ್ರಿಯೆಗಳಿಗೂ ಚಾಲನೆ ದೊರಕಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ನಿಗದಿತ ಅವಧಿಯೊಳಗೆ ಪಾಲಿಕೆ ಚುನಾವಣೆ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. 

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *