
kerala | ಕೇರಳ : ಗಂಟಲಲ್ಲಿ ಇಡ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ – ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಡೆದ ದುರಂತ!
ಪಾಲಕ್ಕಾಡ್ (ಕೇರಳ), ಸೆ. 18: ಇಡ್ಲಿ ತಿನ್ನುವ ಸ್ಪರ್ಧೆ (idli eating competition) ಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೋರ್ವರ ಗಂಟಲಲ್ಲಿ ಇಡ್ಲಿ ಸಿಲುಕಿ, ಉಸಿರಾಟದ ತೊಂದರೆಯಿಂದ ಮೃತಪಟ್ಟ ದಾರುಣ ಘಟನೆ, ಕೇರಳ ರಾಜ್ಯದ ಪಾಲಕ್ಕಾಡ್ (palakkad) ಜಿಲ್ಲೆಯ ಅಲಮರಾಮ್ ಎಂಬ ಪ್ರದೇಶದಲ್ಲಿ, ಸೆ. 14 ರ ಶನಿವಾರ ನಡೆದಿದೆ.
ಕಂಜಿಕೋಡು ಗ್ರಾಮದ ನಿವಾಸಿ, ಲಾರಿ ಚಾಲಕ ಸುರೇಶ್ (50) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಓಣಂ ಹಬ್ಬ (onam festival) ದ ಪ್ರಯುಕ್ತ ಚಟ್ನಿ, ಸಾಂಬರ್ ಇಲ್ಲದೆ ಬರೀ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು.
ಒಟ್ಟು ನಾಲ್ವರು ಸ್ಪರ್ಧಾಳುಗಳಲ್ಲಿ, ಸುರೇಶ್ ಅವರು ಕೂಡ ಓರ್ವರಾಗಿದ್ದರು. ಇತರೆ ಸ್ಪರ್ಧಾಳುಗಳ ರೀತಿಯಲ್ಲಿ ಸುರೇಶ್ ಅವರು ಕೂಡ, ಸ್ಪರ್ಧೆಯಲ್ಲಿ ಜಯ ಸಾಧಿಸಬೇಕೆಂಬ ಉಮೇದಿನಲ್ಲಿ ಗಡಿಬಿಡಿಯಲ್ಲಿ ಇಡ್ಲಿ (idli) ತಿನ್ನಲಾರಂಭಿಸಿದ್ದಾರೆ.
ಒಂದೇ ಬಾರಿ ಅವರು ಮೂರು ಇಡ್ಲಿಗಳನ್ನು ಬಾಯಲ್ಲಿ ಹಾಕಿಕೊಂಡಿದ್ದು, ಈ ವೇಳೆ ಅವರ ಗಂಟಲಲ್ಲಿ ಇಡ್ಲಿಯೊಂದು ಸಿಲುಕಿ ಬಿದ್ದಿದೆ. ಉಸಿರಾಡಲು ಕಷ್ಟಪಡಲಾರಂಭಿಸಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣವೇ ಅವರನ್ನು ಉಪಚರಿಸಿ, ವಾಹನವೊಂದರಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.