shimoga | Lok Sabha Constituency Redistricting: Home Minister Amit Shah's statement is not credible - CM Siddaramaiah shimoga | ಲೋಕಸಭಾ ಕ್ಷೇತ್ರ ಮರುವಿಂಗಡಣೆ : ಗೃಹ ಸಚಿವ ಅಮಿತ್ ಶಾ ಹೇಳಿಕೆ ನಂಬಿಕೆಗೆ ಅರ್ಹವಲ್ಲ – ಸಿಎಂ ಸಿದ್ದರಾಮಯ್ಯ

bengaluru | ಲೋಕಸಭಾ ಕ್ಷೇತ್ರ ಮರುವಿಂಗಡಣೆ : ಗೃಹ ಸಚಿವ ಅಮಿತ್ ಶಾ ಹೇಳಿಕೆ ನಂಬಿಕೆಗೆ ಅರ್ಹವಲ್ಲ – ಸಿಎಂ ಸಿದ್ದರಾಮಯ್ಯ

ಬೆಂಗಳೂರು (bengaluru), ಫೆ. 27: ಕ್ಷೇತ್ರ ಮರುವಿಂಗಡಣೆಗೆ ನರೇಂದ್ರ ಮೋದಿ ಅವರ ಉತ್ಸಾಹ ನೋಡಿದರೆ, ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುವುದಕ್ಕೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣದ ರಾಜ್ಯಗಳ ಜನತೆಗೆ ಶಿಕ್ಷಿಸುವ ದುರುದ್ದೇಶ ಇರುವಂತೆ ಕಾಣಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಫೆ. 27 ರಂದು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೇಂದ್ರದ ಅನ್ಯಾಯದ ವಿರುದ್ಧ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ದೂರಿದ್ದಾರೆ.

ಕೇಂದ್ರ ಗೃಹ ಸಚಿವರ ಬೀಸು ಹೇಳಿಕೆಯನ್ನು ನೋಡಿದರೆ, ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.  

ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಇಲ್ಲವೇ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ ಎಂದರು.

ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ. ಈ ಅನ್ಯಾಯವನ್ನು ತಪ್ಪಿಸಲಿಕ್ಕಾಗಿಯೇ  ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹಿಂದಿನ ಎರಡು ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಕಳೆದ 50 ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳು ಪರಿಣಾಮಕಾರಿ ಕ್ರಮಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿರುವುದು ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿವೆ. ಇದೇ ವೇಳೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮಾತ್ರವಲ್ಲ, ಅಭಿವೃದ್ದಿಯ ಹಾದಿಯಲ್ಲಿ ಇನ್ನೂ ಕುಂಟುತ್ತಾ ಸಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಕ್ಷೇತ್ರ ಮರುವಿಂಗಡಣೆಯನ್ನು ಇತ್ತೀಚಿನ ಜನಗಣತಿಯಿಂದ ಪಡೆದ ಜನಸಂಖ್ಯೆಯ ಅನುಪಾತದ ಮೇಲೆ ನಡೆಸಿದರೆ ಜನಸಂಖ್ಯೆಯ ನಿಯಂತ್ರಣ ಮಾಡಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಒಂದೋ ಕಡಿಮೆಯಾಗಲಿದೆ. ಇಲ್ಲದೆ ಇದ್ದರೆ ಉತ್ತರದ ರಾಜ್ಯಗಳ ಕ್ಷೇತ್ರಗಳ ಪ್ರಮಾಣದಲ್ಲಿ ಏರಿಕೆ ಆಗಲಾರದು. ಈ ಎರಡೂ ಬೆಳವಣಿಗಳಿಂದ ದಕ್ಷಿಣದ ರಾಜ್ಯಗಳೇ ನಷ್ಟ ಅನುಭವಿಸಲಿದೆ ಎನ್ನುವುದು ಗೃಹಸಚಿವ ಶಾ ಅವರಿಗೆ ತಿಳಿದಿಲ್ಲವೇ?

ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಇವುಗಳ ಪ್ರಕಾರ ಇತ್ತೀಚಿನ ಜನಗಣತಿಯನ್ನು (2021 ಇಲ್ಲವೇ 2031) ಮಾತ್ರ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆದರೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 26ಕ್ಕೆ ಇಳಿಯುವ ಸಾಧ್ಯತೆಯಿದೆ. ಇದೇ ರೀತಿ ಆಂಧ್ರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ರಿಂದ 34, ಕೇರಳದ ಸಂಖ್ಯೆ 20 ರಿಂದ 12ಕ್ಕೆ, ತಮಿಳುನಾಡಿನ ಸಂಖ್ಯೆ 39 ರಿಂದ 31ಕ್ಕೆ ಇಳಿಯಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80 ರಿಂದ 91, ಬಿಹಾರದ ಸಂಖ್ಯೆ 40ರಿಂದ 50, ಮಧ್ಯಪ್ರದೇಶದ ಸಂಖ್ಯೆ 29 ರಿಂದ 33ಕ್ಕೆ ಏರಿಕೆಯಾಗಲಿದೆ. ಇದನ್ನು ಅನ್ಯಾಯ ಎನ್ನದೆ ನ್ಯಾಯ ಎನ್ನಲು ಸಾಧ್ಯವೇ? ಈ ಅನ್ಯಾಯವನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂದರೆ ಒಂದೋ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಜನಸಂಖ್ಯೆಯ ಮಾನದಂಡವನ್ನು ಕೈಬಿಟ್ಟು ಈಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಜನತೆ ಬಿಜೆಪಿಯನ್ನು ಬೆಂಬಲಿಸದೆ ಇದ್ದರೆ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಆಶೀರ್ವಾದ ಇರುವುದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಚಾರದ ಕಾಲದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೀಡಿದ್ದ ಎಚ್ಚರಿಕೆ ನಮ್ಮ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಒಂದೊಂದು ಕ್ರಮದಲ್ಲಿಯೂ ನಿಜವಾಗುತ್ತಿದೆ ಎಂದು ಟೀಕಿಸಿದ್ದಾರೆ.

ತೆರಿಗೆ ಹಂಚಿಕೆ, ಜಿಎಸ್ ಟಿ  ಮತ್ತು ಪ್ರಕೃತಿ ವಿಕೋಪ ಪರಿಹಾರದಲ್ಲಿ ಅನ್ಯಾಯ, ರಾಜ್ಯಕ್ಕೆ ಕಂಟಕವಾಗಿರುವ ಹೊಸ ಶಿಕ್ಷಣ ನೀತಿ ಮತ್ತು ಯುಜಿಸಿ ನಿಯಮಾವಳಿಗಳಿಗೆ ತಿದ್ದುಪಡಿಯೂ ಸೇರಿದಂತೆ ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವೂ ರಾಜ್ಯವನ್ನು ಶಿಕ್ಷಿಸುವ ದುರುದ್ದೇಶದಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ದೂರಿದ್ದಾರೆ.

ಈ ಎಲ್ಲ ಅನ್ಯಾಯದ ವಿರುದ್ಧ ರಾಷ್ಟ್ರಮಟ್ಟದಲ್ಲಿ ದನಿ ಎತ್ತದಂತೆ ಮಾಡಲು ಸಂಸತ್ ನಲ್ಲಿ ದಕ್ಷಿಣದ ರಾಜ್ಯಗಳ ದನಿಯನ್ನು ಇನ್ನಷ್ಟು ಕ್ಷೀಣಗೊಳಿಸುವ ದುರುದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಈಗ ಕ್ಷೇತ್ರ ಮರುವಿಂಗಡಣೆಯ ಹೊಸ ಅಸ್ತ್ರವನ್ನು ಎತ್ತಿಕೊಂಡು ಹೊರಟಿದೆ.

ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸದಸ್ಯರು ಜೀತದಾಳುಗಳಂತೆ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾ ಬೀದಿ ಜಗಳದಲ್ಲಿ ಮಗ್ನರಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಜಾತಿ-ಧರ್ಮ ಪಕ್ಷ -ಪಂಥಗಳ ಭೇದವನ್ನು ಮರೆತು ಕನ್ನಡಿಗರೆಲ್ಲರೂ ಒಂದಾಗಿ ಒಂದೇ ದನಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಬೇಕಾಗಿದೆ. ಈ ಅನ್ಯಾಯದ ವಿರುದ್ದ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Press Statement of Chief Minister Shri Siddaramaiah : Amit Shah’s Statement on Delimitation is Not Credible

Union Home Minister Amit Shah’s claim that southern states will not be disadvantaged in the Delimitation process is not trustworthy. His statement rather appears to be aimed at creating confusion in the southern states. Going by the Home Minister’s vague remarks, it seems that either he lacks proper information or there is a deliberate intent to disadvantage the southern states, including Karnataka, Telangana, Tamil Nadu, Kerala, and Andhra Pradesh. If the Union Government genuinely wishes to ensure fairness for the southern states, the Home Minister must clarify whether Delimitation will be based on the latest population ratio or on the current number of Lok Sabha seats.

anavatti | How to get A and B khata for immovable properties? What is Anavatti Town Panchayat Announcement? anavatti | ಸ್ಥಿರಾಸ್ತಿಗಳಿಗೆ ಎ - ಬಿ ಖಾತಾ ಪಡೆಯುವುದು ಹೇಗೆ? ಆನವಟ್ಟಿ ಪಟ್ಟಣ ಪಂಚಾಯ್ತಿ ಪ್ರಕಟಣೆಯೇನು? Previous post anavatti | ಸ್ಥಿರಾಸ್ತಿಗಳಿಗೆ ಎ – ಬಿ ಖಾತಾ ಪಡೆಯುವುದು ಹೇಗೆ? ಆನವಟ್ಟಿ ಪಟ್ಟಣ ಪಂಚಾಯ್ತಿ ಪ್ರಕಟಣೆಯೇನು?
shimoga | Shimoga District Government Employees' Games: What did the DC say? shimoga | ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ : ಡಿಸಿ ಹೇಳಿದ್ದೇನು? Next post shimoga | ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ : ಡಿಸಿ ಹೇಳಿದ್ದೇನು?