ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾರ್ಚ್ 12: ಇತ್ತೀಚೆಗೆ ಮಂಡನೆಯಾದ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಆಯ್ದ ನಗರ-ಪಟ್ಟಣ ಪ್ರದೇಶಗಳ ಉದ್ಯಾನವನಗಳಲ್ಲಿ, ‘ಮಿಯಾವಾಕಿ’ ಪದ್ದತಿಯಡಿ ಕಿರು ಅರಣ್ಯ ಬೆಳೆಸುವ ಯೋಜನೆ ಘೋಷಣೆ ಮಾಡಲಾಗಿದೆ.
ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕೂಡ, ನಗರ ವ್ಯಾಪ್ತಿಯ ಆಯ್ದ ಉದ್ಯಾನವನಗಳಲ್ಲಿ ‘ಮಿಯಾವಾಕಿ’ ಪದ್ದತಿಯಡಿ ಕಿರು ಅರಣ್ಯ ಬೆಳೆಸುವ ಮಹತ್ತರ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ.
ಈ ವಿಷಯವನ್ನು ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ತಿಳಿಸಿದ್ದಾರೆ. ‘ಜಪಾನ್ ದೇಶದಲ್ಲಿ ಕಾರ್ಯಗತಗೊಂಡ ನಂತರ ವಿಶ್ವದಾದ್ಯಂತ ಪ್ರಸಿದ್ದಿ ಪಡೆದ ‘ಮಿಯಾವಾಕಿ’ ಪದ್ದತಿಯಡಿ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಆಯ್ದ ಪಾರ್ಕ್ ಗಳಲ್ಲಿ ಕಿರು ಅರಣ್ಯ ಬೆಳೆಸುವ ಚಿಂತನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ಕುರಿತಂತೆ ಪರಿಸರಾಸಕ್ತರು, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದವರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ಶಿವಮೊಗ್ಗದ ಆಯ್ದ ಉದ್ಯಾನವನಗಳಲ್ಲಿ ಕಿರು ಅರಣ್ಯ ಬೆಳೆಸಲು ಕ್ರಮಕೈಗೊಳ್ಳಲಾಗುವುದು’ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಅಗತ್ಯವಿದೆ ಯೋಜನೆ : ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗದಲ್ಲಿ, ಪ್ರಾಕೃತಿಕ ಸಂಪತ್ತಿನ ವಿನಾಶವೂ ಕೂಡ ಏರುಗತಿಯಲ್ಲಿದೆ. ನಗರ ವ್ಯಾಪ್ತಿಯಲ್ಲಿ ಮರಗಿಡಗಳು, ಕೆರೆಕಟ್ಟೆಗಳು, ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ!
ಇದರಿಂದ ಶಿವಮೊಗ್ಗ ನಗರದ ಪ್ರಾಕೃತಿಕ ವ್ಯವಸ್ಥೆ ಏರುಪೇರಾಗುವಂತಾಗಿದೆ. ವರ್ಷದಿಂದ ವರ್ಷಕ್ಕೆ ನಗರದ ತಾಪಮಾನ ಹೆಚ್ಚಾಗುತ್ತಿದೆ. ಇದು ನಗರದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ನಗರದ ಪ್ರಾಕೃತಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ತುರ್ತು ಅಗತ್ಯ, ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಗಿಡಮರಗಳ ಹೆಚ್ಚೆಚ್ಚು ಬೆಳೆಸುವ, ಕೆರೆಕಟ್ಟೆಗಳನ್ನು ಉಳಿಸುವ ಯೋಜನೆಗಳು ಅನುಷ್ಠಾನವಾಗಬೇಕಾಗಿದೆ.
ಈ ನಿಟ್ಟಿನಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ, ಪಾಳು ಬಿದ್ದ ಸ್ಥಿತಿಯಲ್ಲಿರುವ ಉದ್ಯಾನವನಗಳಲ್ಲಿ ಯಥೇಚ್ಛವಾಗಿ ಗಿಡಮರಗಳನ್ನು ಬೆಳೆಸುವ ಮೂಲಕ, ಕಿರು ಅರಣ್ಯಗಳಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ‘ಮಿಯಾವಾಕಿ ಪದ್ದತಿಯಡಿ ಕಿರು ಅರಣ್ಯ ಬೆಳೆಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ.
ಏನೀದು ಮಿಯಾವಾಕಿ ಪ್ರಯೋಗ?
*** ಜಪಾನ್ ದೇಶದ ಸಸ್ಯ ತಜ್ಞ ಮಿಯಾವಾಕಿ ಅವರು ಕಡಿಮೆ ಜಾಗದಲ್ಲಿ ಅರಣ್ಯ ಬೆಳೆಸಿ ಯಶಸ್ಸು ಕಂಡಿದ್ದರು. ಇದನ್ನು ಮಿಯಾವಾಕಿ ಪ್ರಯೋಗವೆಂದೇ ವಿಶ್ವದಾದ್ಯಂತ ಯಶಸ್ವಿಯಾಗಿದೆ. ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುವ ಈ ಪ್ರಯೋಗ ಸದ್ಯ ನಗರ-ಪಟ್ಟಣಗಳಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಸದರಿ ಪ್ರಯೋಗವನ್ನು ಶಿವಮೊಗ್ಗ ನಗರದಲ್ಲಿಯೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತಗಳು ಚಿತ್ತ ಹರಿಸಬೇಕಾಗಿದೆ. ಪ್ರಸ್ತುತ ನಗರದಾದ್ಯಂತ ಭಾರೀ ದೊಡ್ಡ ಸಂಖ್ಯೆಯಲ್ಲಿ ಲೇಔಟ್ ಗಳು ನಿರ್ಮಾಣವಾಗುತ್ತಿದೆ. ಪ್ರತಿಯೊಂದು ಲೇಔಟ್ ನಲ್ಲಿಯೂ ಉದ್ಯಾನವನಗಳಿವೆ.
ಇಂತಹ ಪಾರ್ಕ್ ಗಳಲ್ಲಿ ಕೆಲವೆಡೆ ಮಿಯಾವಾಕಿ ಪದ್ದತಿಯಂತೆ ಕಿರು ಅರಣ್ಯಗಳನ್ನು ಬೆಳೆಸಲು ಮೀಸಲಿಡಬೇಕಾಗಿದೆ. ಇದರಿಂದ ನಾಗರದ ಪ್ರಾಕೃತಿಕ ವ್ಯವಸ್ಥೆಯ ಸಮತೋಲನದ ಜೊತೆಗೆ ನಾಗರಿಕರಿಗೆ ಶುದ್ಧ ಗಾಳಿ ದೊರಕುತ್ತದೆ. ಪಶುಪಕ್ಷಿಗಳಿಗೂ ಅನುಕೂಲವಾಗಲಿದೆ.
ಪಾಲಿಕೆ ಆಯುಕ್ತ ಮಾಯಣ್ಣಗೌಡ ಹೇಳಿದ್ದೇನು?
*** ‘ಜಪಾನ್ ದೇಶದಲ್ಲಿ ಮೊದಲ ಬಾರಿಗೆ ಕಾರ್ಯಗತಗೊಂಡಿದ್ದ, ತದನಂತರ ವಿಶ್ವದಾದ್ಯಂತ ಪ್ರಸಿದ್ದಿ ಪಡೆದ ‘ಮಿಯಾವಾಕಿ’ ಪದ್ದತಿಯಡಿ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಆಯ್ದ ಪಾರ್ಕ್ ಗಳಲ್ಲಿ ಕಿರು ಅರಣ್ಯ ಬೆಳೆಸುವ ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಪರಿಸರಾಸಕ್ತರು, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದವರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ಶಿವಮೊಗ್ಗದ ಆಯ್ದ ಉದ್ಯಾನವನಗಳಲ್ಲಿ ಕಿರು ಅರಣ್ಯ ಬೆಳೆಸಲು ಕ್ರಮಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರವರು ತಿಳಿಸಿದ್ದಾರೆ.

