shimoga news | ಶಿವಮೊಗ್ಗ : ಸರ್ವರ್ ಡೌನ್ ಸಮಸ್ಯೆ – ಪಡಿತರ ಪಡೆಯಲು ನಾಗರಿಕರ ಪರದಾಟ!

laptop - server down
ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಅಕ್ಟೋಬರ್ 29: ಸರ್ವರ್ ಡೌನ್ ತಾಂತ್ರಿಕ ಸಮಸ್ಯೆಯಿಂದ ಪಡಿತರ ಧಾನ್ಯ ಪಡೆಯಲು ನಾಗರಿಕರು ಪರದಾಡುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದರ ಜೊತೆಗೆ, ಅಂಗಡಿಗಳ ಬಳಿ ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದೆ ಎಂಬ ದೂರುಗಳು ಪಡಿತರದಾರರಿಂದ ಕೇಳಿಬರಲಾರಂಭಿಸಿದೆ!

ಕಳೆದ ಕೆಲ ದಿನಗಳಿಂದ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದು, ಹೆಬ್ಬೆಟ್ಟಿನ ಬಯೋಮೆಟ್ರಿಕ್ ವಿವರ ದಾಖಲಿಸಲು ಅಂಗಡಿಗಳ ಬಳಿ ಕಾದು ಕುಳಿತುಕೊಳ್ಳುವಂತಾಗಿದೆ. ತಮ್ಮೆಲ್ಲ ಕೆಲಸಕಾರ್ಯ ಬಿಟ್ಟು ಪಡಿತರ ಧಾನ್ಯ ಪಡೆಯಲು ಅಲೆದಾಡುವಂತಾಗಿದೆ ಎಂದು ಕೆಲ ಪಡಿತರ ಚೀಟಿದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಪಡಿತರ ಪಡೆಯಲು ರೇಷನ್ ಶಾಪ್ ಗೆ ಹೋದರೆ ಸರ್ವರ್ ಡೌನ್ ಸಮಸ್ಯೆ ಎಂದು ಹೇಳುತ್ತಾರೆ. ಗಂಟೆಗಟ್ಟಲೆ ಕಾಯುವಂತಾಗಿದೆ. ಎರಡು ದಿನ ಅಂಗಡಿಗೆ ಅಲೆದಾಡಿ ಪಡಿತರ ಧಾನ್ಯ ಪಡೆಯುವಂತಾಯಿತು. ಇದರಿಂದ ನಮ್ಮಗಳ ದೈನಂದಿನ ಕೆಲಸಕಾರ್ಯಗಳ ಮೇಲೆ ಪರಿಣಾಮ ಬೀರುವಂತಾಗಿದೆ’ ಎಂದು ಪಡಿತರ ಚೀಟಿದಾರರೋರ್ವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನ್ಯಾಯಬೆಲೆ ಅಂಗಡಿಗಳು ಮಾಲೀಕರು – ಸಿಬ್ಬಂದಿಗಳು ಕೂಡ ಸರ್ವರ್ ಡೌನ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ‘ತಾಂತ್ರಿಕ ಸಮಸ್ಯೆಯ ಮಾಹಿತಿಯ ಅರಿವಿಲ್ಲದೆ, ಕೆಲ ಪಡಿತರದಾರರು ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಕೆಲವೊಮ್ಮೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಂಗಡಿ ತೆರೆದು ಕುಳಿತುಕೊಳ್ಳುವಂತಾಗಿದೆ.

ಕೆಲವೊಮ್ಮೆ ಸರ್ವರ್ ಸಿಗದಿದ್ದರೆ, ಮತ್ತೆ ಕೆಲವೊಮ್ಮೆ ಸರ್ವರ್ ಸ್ಲೋ ಆಗಿ ಆಹಾರ ಇಲಾಖೆಯ ಸಂಬಂಧಿತ ವೆಬ್ ಪುಟಗಳು ತೆರೆದುಕೊಳ್ಳುವುದು ವಿಳಂಬವಾಗುತ್ತದೆ. ಒಂದು ಕಾರ್ಡ್ ವಿವರ ಹಾಗೂ ಬಯೋಮೆಟ್ರಿಕ್ ವಿವರ ಎಂಟ್ರಿ ಮಾಡಲು ಹಲವು ನಿಮಿಷಗಳೇ ಆಗುತ್ತದೆ.

ಆಹಾರ ಇಲಾಖೆಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೆ, ನಮ್ಮ ಹಂತದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಬೆಂಗಳೂರಿನ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳುತ್ತಾರೆ’ ಎಂದು ನ್ಯಾಯಬೆಲೆ ಅಂಗಡಿಯ ಮಾಲೀಕರೋರ್ವರು ತಿಳಿಸುತ್ತಾರೆ.

ಪರಿಹರಿಸಲಿ : ಸರ್ವರ್ ಡೌನ್ ಸಮಸ್ಯೆಯಿಂದ ಕೆಲ ಪಡಿತರದಾರರು ಕಾಲಮಿತಿಯೊಳಗೆ ದವಸ ಧಾನ್ಯ ಪಡೆಯಲು ಆಗದಂತಾಗಿದೆ. ತಕ್ಷಣವೇ ಆಹಾರ ಇಲಾಖೆ ಇತ್ತ ಗಮನಹರಿಸಬೇಕು. ಸರ್ವರ್ ಡೌನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬುವುದು ಪಡಿತರ ಚೀಟಿದಾರರ ಆಗ್ರಹವಾಗಿದೆ.

 

ಅಕ್ಕಿ ಜೊತೆಗೆ ರಾಗಿ ವಿತರಣೆ

*** ಶಿವಮೊಗ್ಗ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಪಡಿತರದಾರರಿಗೆ ಅಕ್ಕಿಯ ಜೊತೆಗೆ ರಾಗಿಯನ್ನು ಕೂಡ ನೀಡಲಾಗುತ್ತಿದೆ. ಇದಕ್ಕೆ ಪಡಿತರ ಚೀಟಿದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಜೋಳ ನೀಡಿದರೂ ಸಾಕಷ್ಟು ಅನುಕೂಲವಾಗಲಿದೆ ಎಂಬುವುದು ಕೆಲ ಪಡಿತರ ಚೀಟಿದಾರರ ಅಭಿಪ್ರಾಯವಾಗಿದೆ.

Shivamogga: Server Outage – Citizens Struggle to Obtain Ration Supplies! | Shivamogga, October 29: A technical issue involving a server outage has left citizens struggling to collect their ration supplies. Ration cardholders have begun complaining that they are forced to run from one fair-price shop to another, and are also having to wait for hours outside these shops!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *