ಹಣ ವಸೂಲಿ : ತಪ್ಪಿತಸ್ಥ ಮ್ಯಾನ್ ಪವರ್ ಏಜೆನ್ಸಿಗಳ ವಿರುದ್ದ ಕ್ರಮಕ್ಕೆ ಡಿಸಿ ಸೂಚನೆ

ಹಣ ವಸೂಲಿ : ತಪ್ಪಿತಸ್ಥ ಮ್ಯಾನ್ ಪವರ್ ಏಜೆನ್ಸಿಗಳ ವಿರುದ್ದ ಕ್ರಮಕ್ಕೆ ಡಿಸಿ ಸೂಚನೆ ಮರಳು ದಂಧೆ : ಸಿ ಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಕ್ಕೆ ಆದೇಶ ಶಾಲಾ ಭೂಮಿ ಒತ್ತುವರಿ ತೆರವಿಗೆ, ಮೀನುಗಾರಿಕೆ ನಿರ್ಬಂಧಕ್ಕೆ ಶಿವಮೊಗ್ಗ ಡಿಸಿ ತಾಕೀತು!

ಶಿವಮೊಗ್ಗ , ಜು. 2: ‘ಸರ್ಕಾರಿ ಕಚೇರಿಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗಳಿಂದ, ಕೆಲ ಮ್ಯಾನ್ ಪವರ್ ಏಜೆನ್ಸಿಗಳು ಭಾರೀ ಪ್ರಮಾಣದ ಹಣ ವಸೂಲಿ ಮಾಡುತ್ತಿರುವ ದೂರುಗಳ ಕುರಿತಂತೆ ಪರಿಶೀಲನೆ ನಡೆಸುವಂತೆ’ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಕಾರ್ಮಿಕ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶನಿವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿತವಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಸಮವಸ್ತ್ರಗಳ ಬಗ್ಗೆಯೂ ದೂರುಗಳಿವೆ. ಕೆಲವು ಸಂಸ್ಥೆಗಳು ಪ್ರತಿ ವ್ಯಕ್ತಿಯಿಂದ 2000 ರೂ. ಹಾಗೂ ಸಮವಸ್ತ್ರದ ಬಾಬ್ತು ಎಂದು 4,000 ರೂ. ಪಡೆಯುತ್ತಿರುವ ಆರೋಪಗಳಿವೆ. ತಪ್ಪಿತಸ್ಥ ಸಂಸ್ಥೆಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ತಿಳಿಸಿದ್ದಾರೆ.

ಮರಳು ದಂಧೆ: ಸಮಿತಿ ಸದಸ್ಯ ಜಗದೀಶ್ ಹಸೂಡಿ ಅವರು ಮಾತನಾಡಿ,  ‘ಮರಳು ಕ್ವಾರಿಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಕಡಿವಾಣ ಹಾಕುವ ಕಾರ್ಯವಾಗಬೇಕಾಗಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ’ ಎಂದು ದೂರಿದರು.

ಜಿಲ್ಲಾಧಿಕಾರಿಗಳು ಮಾತನಾಡಿ, ಮರಳು ಕ್ವಾರಿಗಳ ನಿರ್ವಾಹಕರು ಪ್ರತಿ ತಿಂಗಳು ಕ್ವಾರಿಗಳಲ್ಲಿ ಅಳವಡಿಸಿರುವ ಸಿ ಸಿ ಕ್ಯಾಮರಾಗಳ ಚಿತ್ರಿತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕಳೆದ ಆರು ತಿಂಗಳುಗಳಿಂದ ಸಿ ಸಿ ಕ್ಯಾಮರಾಗಳ ಮಾಹಿತಿ ಒದಗಿಸದಿರುವ, ಕ್ವಾರಿಗಳ ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ ಆದೇಶಿಸಿದ್ದಾರೆ.

ಮೀನುಗಾರಿಕೆ: ಮಳೆಯ ಕೊರತೆಯಿಂದ ಶರಾವತಿ ಮತ್ತು ಭದ್ರಾ ಜಲಾಶಯಗಳ ಹಿನ್ನೀರಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಮತ್ತೊಂದೆಡೆ, ಮೀನುಗಳನ್ನು ಅವ್ಯಾಹತವಾಗಿ ಹಿಡಿಯಲಾಗುತ್ತಿದೆ. ಮೀನುಗಳ ಸಂತತಿ ನಾಶಗೊಳ್ಳುವ ಸಂಭವವಿದೆ. ಮೀನುಮರಿಗಳ ಸಂತಾನೋತ್ಪತ್ತಿಯ ಕಾಲ ಇದಾಗಿರುವುದರಿಂದ, ಮೀನು ಹಿಡಿಯದಂತೆ ಕ್ರಮವಹಿಸಲು ಮೀನುಗಾರಿಕೆ ಇಲಾಖಾಧಿಕಾರಿಗಳಿಗೆ ಡಿಸಿ ಸಲಹೆ ನೀಡಿದ್ದಾರೆ.

ಮದ್ಯದಂಗಡಿ: ಕುವೆಂಪು ವಿವಿ ಮುಂಭಾಗದಲ್ಲಿ ಮದ್ಯದಂಗಡಿ ಆರಂಭಗೊಂಡಿದ್ದು, ಇಲ್ಲಿನ ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳುತ್ತಿರುವ ಬಗ್ಗೆ ಆತಂಕವಿದೆ. ಈ ಬಗ್ಗೆ ತಕ್ಷಣ ಕ್ರಮವಹಿಸುವಂತೆ ಸಮಿತಿ ಸದಸ್ಯ ರಾಜಕುಮಾರ್ ಅವರು ಸಭೆಯಲ್ಲಿ ತಿಳಿಸಿದರು.

ಅಬಕಾರಿ ಇನ್ಸ್‌ಪೆಕ್ಟರ್ ಅವರು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವ ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನೂ ಕ್ರಮ ಜರುಗಿಸುವಂತೆ ಡಿಸಿ ಸೂಚಿಸಿದ್ದಾರೆ.

ಜಾಗ ಒತ್ತುವರಿ: ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸರ್ಕಾರಿ ಶಾಲಾ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಜುಲೈ 15 ರೊಳಗಾಗಿ ವಾಸ್ತವ ಗಮನಿಸಿ, ನಿಯಮಾನುಸಾರ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

ಕೋಳಿ ಫಾರಂ: ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೋಳಿ ಫಾರಂಗಳು ನಿರ್ಮಾಣವಾಗಿದ್ದು, ಇಲ್ಲಿನ ಜನಸಮುದಾಯಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಬಗ್ಗೆ ಆಕ್ಷೇಪವಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಸಮಿತಿ ಸದಸ್ಯರಾದ ನಾಗರಾಜ್, ಹಸೂಡಿ ಜಗದೀಶ್, ರಾಜ್‍ಕುಮಾರ್, ಬಸವರಾಜ ಹಸ್ವಿ, ಏಳುಕೋಟಿ, ರಾಮಚಂದ್ರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *