ಸಾವಿರಾರು ಭಕ್ತರಿಂದ ಮಾರಿಕಾಂಬೆ ದರ್ಶನ!

ಸಾಗರ, ಫೆ. 12: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿ ನಿತ್ಯವೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಭಾನುವಾರವೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆದರು.
ಬಿಸಿಲಿನ ಧಗೆ ಹೆಚ್ಚಿದ್ದರೂ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಭಾನುವಾರ ದಿನ ಸಾರ್ವಜನಿಕರು ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದರು. ದೇವಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿದರು. ಭಾನುವಾರ ರಜಾದಿನ ಆಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ವ್ಯಾಪಾರ ಅಧಿಕವಾಗಿತ್ತು. ಜಾತ್ರೆಯಲ್ಲಿ ಮಳಿಗೆಗಳು ಹಾಕಿದ್ದ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿತ್ತು. ಮಕ್ಕಳ ಆಟಿಕೆ, ವೈವಿಧ್ಯಮಯ ಡ್ರೆಸ್, ಬಳೆ, ಅಲಂಕಾರಿಕಾ ವಸ್ತುಗಳ ಖರೀದಿಯಲ್ಲಿ ಜನರು ನಿರತರಾಗಿದ್ದರು.
ಜಾತ್ರೆ ಹಿನ್ನೆಲೆಯಲ್ಲಿ ಜಾತ್ರೆ ರಸ್ತೆ, ನಗರಸಭೆ ಸುತ್ತಮುತ್ತಲಿನ ಭಾಗ, ಕೋರ್ಟ್ ರಸ್ತೆ, ಅಮ್ಯೂಸ್‌ಮೆಂಟ್ ಪಾರ್ಕ್ ಭಾಗದಲ್ಲಿ ಸಾಕಷ್ಟು ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಆಹಾರ ಪ್ರಿಯರು ತಮಗಿಷ್ಟದ ಸ್ಟಾಲ್‌ಗಳಲ್ಲಿ ಗೋಬಿ, ಮಸಾಲೆಪುರಿ, ಆಲೂ ಟ್ವಿಸ್ಟರ್, ಸ್ವೀಟ್ ಕಾರ್ನ್ ಸೇರಿಂದತೆ ವಿವಿಧ ಆಹಾರದ ರುಚಿ ಸವಿದರು.
ಸಾಂಸ್ಕೃತಿಕ ಸಂಭ್ರಮ: ಶ್ರೀ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಫೆ. 8ರಿಂದಲೂ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಾತ್ರೆಯ ಸಾಂಸ್ಕೃತಿಕ ಸಮಿತಿಯು ನಾಡಿನ ಹೆಸರಾಂತ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಸಾವಿರಾರು ಕಲಾಸಕ್ತರು ದಿನನಿತ್ಯ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ.
ಸುಗಮ ಸಂಗೀತ, ಭಾವಸಂಗೀತ, ರಸಮಂಜರಿ, ಭರತನಾಟ್ಯ, ಸ್ಯಾಕ್ಸೋಫೋನ್ ವಾದನ, ಯೋಗ ಪ್ರದರ್ಶನ, ಡೊಳ್ಳು ಪ್ರದರ್ಶನ, ಮಲ್ಲಗಂಬ ಪ್ರದರ್ಶನ, ಸೀತಾರ್ ವಾದನ, ವಿವಿಧ ವಾದ್ಯಗಳ ಫ್ಯೂಸನ್ ಕಾರ್ಯಕ್ರಮ, ಕೋಲಾಟ, ನೃತ್ಯ ಕಾರ್ಯಕ್ರಮ ಹೀಗೆ ಹತ್ತು ಅನೇಕ ಕಾರ್ಯಕ್ರಮಗಳನ್ನು ಜಾತ್ರಾ ಸಮಿತಿ ಆಯೋಜಿಸಿದೆ.
ಸಾಗರದ ನಗರಸಭೆಯ ಆವರಣದಲ್ಲಿ ನಿರ್ಮಿಸಿರುವ ಮಾರಿಕಾಂಬಾ ಕಲಾವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಸಾಂಸ್ಕೃತಿಕ ಪ್ರದರ್ಶನಗಳು ಕಲಾವಿದರಿಂದ ಪ್ರದರ್ಶನ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಂಸ್ಕೃತಿಕ ಪ್ರದರ್ಶನ ನೇರವಾಗಿ ಪ್ರಸಾರಗೊಳ್ಳುತ್ತಿದೆ.

ಅನ್ನದಾನಕ್ಕೆ ಕಾರ್ಮಿಕರ ದೇಣಿಗೆ
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ದಿನ ನಿತ್ಯ ಅನ್ನದಾಸೋಹ ನಡೆಯುತ್ತಿದ್ದು, ದಾನಿಗಳ ಆರ್ಥಿಕ ಸಹಕಾರ ಹಾಗೂ ಜಾತ್ರಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ. ಭಾನುವಾರ ಕೂಡ ಸಾವಿರಾರು ಜನರು ದೇವರ ದರ್ಶನ ಪಡೆದರು. ವೀರಶೈವ ಕಲ್ಯಾಣ ಮಂದಿರದಲ್ಲಿ ಸಾವಿರಾರು ಜನರು ಪ್ರಸಾದ ಸೇವಿಸಿದರು. ಭಾನುವಾರದ ಅನ್ನ ದಾಸೋಹಕ್ಕೆ ಖಾಸಗಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ 1.5 ಲಕ್ಷ ರೂ.ಗೂ ಅಧಿಕ ದೇಣಿಗೆ ನೀಡಲಾಯಿತು. ಪ್ರಮುಖರಾದ ಆರ್.ಶ್ರೀನಿವಾಸ್, ರಾಬರ್ಟ್ ಗೂಮ್ಸ್, ರಾಜು ಎಸ್.ಎನ್. ನಗರ, ವಿ.ವೆಂಕಟೇಶ್, ಗಣೇಶ್.ಟಿ.ಎಂ., ಮುರುಗನ್ ಎಪಿಎಂ ಮತ್ತಿತರರು ದೇಣಿಗೆ ಸಹಕಾರ ನೀಡಿದ್ದಾರೆ.


ನಾನು ಸಾಗರದಲ್ಲಿ ಜನಿಸಿದವನು, ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನೀಡಿದರೂ ನನ್ನೂರಿನ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಕಾರ್ಯಕ್ರಮ ನೀಡುವುದು ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಸಂಗತಿ. ಪ್ರಸಿದ್ಧ ವಾದ್ಯಗಾರರು ನನ್ನೊಂದಿಗೆ ಪ್ರದರ್ಶನ ನೀಡುತ್ತಿದ್ದಾರೆ.

| ಶ್ರೀಧರ ಸಾಗರ, ಸ್ಯಾಕ್ಸೋಫೋನ್

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →