ಕುಡಿಯುವ ನೀರಿಗೆ ಹಾಹಾಕಾರ : ಎಂಜಿನಿಯರ್ ಭೇಟಿ – ನಾಗರೀಕರ ಮನವಿ!

ಶಿವಮೊಗ್ಗ, ಡಿ. 28: ಮಹಾನಗರ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿ ಸೋಮಿನಕೊಪ್ಪ ಸುತ್ತಮುತ್ತಲು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಬುಧವಾರ ಬೆಳಿಗ್ಗೆ ಜಲ ಮಂಡಳಿ ಸಹಾಯಕ ಎಂಜಿನಿಯರ್ ಜೀವನ್ ಅವರು ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಿದರು.
ಈ ವೇಳೆ ನಾಗರೀಕರು ಮನವಿ ಪತ್ರ ಅರ್ಪಿಸಿದರು. ಕಳೆದ ಕೆಲ ದಿನಗಳಿಂದ ಸೋಮಿನಕೊಪ್ಪ, ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯ ಕಂಡುಬರುತ್ತಿದೆ ಎಂದು ನಿವಾಸಿಗಳು ದೂರಿದರು.
ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವಿದ್ದರೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿರುವುದು ಬೇಸರದ ಸಂಗತಿ. ಸೋಮಿನಕೊಪ್ಪದಲ್ಲಿ ಸಮರ್ಪಕ ನೀರು ಪೂರೈಕೆಗಾಗಿಯೇ ಹೊಸದಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಈ ಟ್ಯಾಂಕ್ ಮೂಲಕ ನೀರು ಪೂರೈಕೆಯಾಗುತ್ತಿಲ್ಲ.
ತಕ್ಷಣವೇ ಹೊಸ ಓವರ್ ಹೆಡ್ ಟ್ಯಾಂಕ್ ಮೂಲಕ ನೀರ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಹಾಗೆಯೇ ಸೋಮಿನಕೊಪ್ಪ, ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಹಲವೆಡೆ 247 ಕಾಮಗಾರಿ ಅಪೂರ್ಣವಾಗಿದೆ. ಕೆಲವೆಡೆ ಪೈಪ್ ಲೈನ್ ಅಳವಡಿಕೆ ಮಾಡಿಲ್ಲ. ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ನಿವಾಸಿಗಳ ಅಹವಾಲು ಆಲಿಸಿದ ನಂತರ ಜೀವನ್ ಅವರು ಮಾತನಾಡಿ, ಕುಡಿಯುವ ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. 247 ಪೈಪ್ ಲೈನ್ ಅಳವಡಿಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮನವಿ ಅರ್ಪಿಸುವ ವೇಳೆ ಪತ್ರಕರ್ತ ಬಿ.ರೇಣುಕೇಶ್, ಷಡಾಕ್ಷರಿ, ಅಮರ್ ಗ್ರ್ಯಾನೈಟ್ ಲಕ್ಷ್ಮಣ್, ನಾಗರತ್ನ, ಸಾವಿತ್ರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →