
shimoga | ಶಿವಮೊಗ್ಗ : ಸರ್ಕಾರಿ ಶಾಲೆಗೆ ಶಾಸಕಿ ಬಲ್ಕೀಶ್ ಬಾನು ದಿಢೀರ್ ಭೇಟಿ!
ಶಿವಮೊಗ್ಗ (shivamogga), ಜ. 28: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆಗೆ, ಜ. 28 ರಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯ ಪ್ರತಿಯೊಂದು ಕೊಠಡಿಗೆ ಭೇಟಿ ನೀಡಿದ ಬಲ್ಕೀಶ್ ಬಾನು ಅವರು, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಶಾಲೆಯಲ್ಲಿ ಸಿಗುತ್ತಿರುವ ಸೌಲಭ್ಯ, ಶಿಕ್ಷಣ ಮತ್ತೀತರ ಸಮಸ್ಯೆಗಳ ಕುರಿತಂತೆ ಮಾಹಿತಿ ಕಲೆ ಹಾಕಿದರು.
ಶಿಕ್ಷಕರು ಸಮರ್ಪಕವಾಗಿ ಪಾಠ-ಪ್ರವಚನ ಮಾಡುತ್ತಿದ್ದಾರಾ? ಅವರು ಹೇಳಿಕೊಡುವುದು ಅರ್ಥವಾಗುತ್ತಿದೆಯಾ? ಏನಾದರೂ ಸಮಸ್ಯೆಯಿದೆಯೇ? ಎಂಬುವುದರ ಕುರಿತಂತೆ ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದರು.
ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು. ಚೆನ್ನಾಗಿ ಓದಬೇಕು. ಹಾಗೆಯೇ ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಂಡು, ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತದನಂತರ ಶಾಲೆಯ ಶಿಕ್ಷಕ ಸಮುದಾಯದವರೊಂದಿಗೆ ಸಮಾಲೋಚಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ, ಕಲಿಕೆಯಲ್ಲಿ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು. ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.
ಶಾಲೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಹಿಂದಿ – ದೈಹಿಕ ಶಿಕ್ಷಕರ ಕೊರತೆಯಿದೆ, ಬಿಸಿಯೂಟದ ಕೊಠಡಿ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಆಟದ ಮೈದಾನವಿಲ್ಲ, ಡಿ ಗ್ರೂಪ್ ನೌಕರರ ನಿಯೋಜನೆ ಮಾಡಬೇಕು, ಲೈಬ್ರರಿಗೆ ಕೊಠಡಿ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣ, ಶಿಕ್ಷಕರಿಗೆ ಪ್ರತಿ ತಿಂಗಳು ವೇತನ ಸಂದಾಯವಾಗುವ ವ್ಯವಸ್ಥೆ ಮತ್ತೀತರ ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.
ಸ್ಥಳದಲ್ಲಿಯೇ ಮೊಬೈಲ್ ಫೋನ್ ಮೂಲಕ ಜಲ ಮಂಡಳಿ ಎಂಜಿನಿಯರ್ ನ್ನು ಸಂಪರ್ಕಿಸಿದ ಬಲ್ಕೀಶ್ ಬಾನು ಅವರು, ಕಾಲಮಿತಿಯೊಳಗೆ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಉಳಿದ ಬೇಡಿಕೆಗಳ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹಮದ್ ಖಾನ್ ಅವರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶಬ್ಬರ್ ಖಾನ್, ಮುಸ್ಸೀ ಗೌಡ್ರು, ಶಾಮೀರ್, ದಾದಾ ಖಲಂದರ್, ನಜೀರ್, ಹಬೀಬ್, ಗೌಸ್ ಪೀರ್, ಜಾಕೀರ್, ಪುಷ್ಪ ಸೇರಿದಂತೆ ಮೊದಲಾದವರಿದ್ದರು.
ಶಾಸಕರ ಭೇಟಿ ಸಂತಸ ಮೂಡಿಸಿದೆ : ಪೋಷಕರ ಅಭಿಮತ
*** ಶಿವಮೊಗ್ಗ ಸೋಮಿನಕೊಪ್ಪದ ಮೌಲಾನಾ ಆಜಾದ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಹಲವು ಸಮಸ್ಯೆಯಿದೆ. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಅವರು ಶಾಲೆಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿರುವುದು ಸಂತಸ ಉಂಟು ಮಾಡಿದೆ. ಜೊತೆಗೆ ಶಾಲೆಯ ಅಭಿವೃದ್ದಿ ದೃಷ್ಟಿಯಿಂದ ಶಾಲಾಭಿವೃದ್ದಿ ಸಮಿತಿ ರಚಿಸುವಂತೆ ಮನವಿ ಮಾಡಲಾಗಿದೆ. ಬಲ್ಕೀಶ್ ಬಾನು ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚಿಸಿ ಕ್ರಮದ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರಾದ ದಾದಾ ಖಲಂದರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
Shimoga, January 28: Maulana Azad Model Government School at Sominakoppa on the outskirts of Shimoga city, Jn. On 28th, Legislative Council MLA Balkeesh Banu made a sudden visit and conducted an inspection.
A list of demands was submitted to the MLAs. There is no supply of drinking water to the school, there is a shortage of Hindi-Physical teachers, there is no heating room system, there is no playground for children, D group employees should be posted, room arrangement for the library, computer education, monthly salary payment system for the teachers and so on.