shimoga | ಶಿವಮೊಗ್ಗ : ಸಾಂಬಾರ್ ಮಾಡುವ ವೇಳೆ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್ – ಕುಸಿದು ಬಿದ್ದ ಮನೆ ಗೋಡೆಗಳು!
ಶಿವಮೊಗ್ಗ (shivamogga), ಫೆ. 24: ಸಾಂಬಾರ್ ಮಾಡುವ ವೇಳೆ ಸಿಲಿಂಡರ್ ರೆಗ್ಯುಲೆಟರ್’ಗೆ ಬೆಂಕಿ ಹೊತ್ತಿಕೊಂಡು, ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ಮನೆಯ ಗೋಡೆಗಳೇ ಕುಸಿದು ಬಿದ್ದ ಘಟನೆ ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರಿನಲ್ಲಿ ಫೆ. 24 ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.
ಅಡಕೆ ಮಂಡಿ ಕಾರ್ಮಿಕರ ಕಾಲೋನಿಯಲ್ಲಿ ಸದರಿ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರ ಓಡಿ ಬಂದಿದ್ದಾರೆ. ಈ ಕಾರಣದಿಂದ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಫೋಟದ ರಭಸಕ್ಕೆ ಮನೆಯ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ? : ಹಮಾಲಿ ಕೆಲಸ ಮಾಡುವ ನಾಗೇಶ್ ಎಂಬುವರಿಗೆ ಸದರಿ ಮನೆ ಸೇರಿದ್ದಾಗಿದೆ. ಅವರು ರೇಣುಕಮ್ಮ ಎಂಬುವರಿಗೆ ಮನೆ ಬಾಡಿಗೆ ನೀಡಿದ್ದರು. ಮಹಿಳೆಯು ಪತಿ, ಮಗನೊಂದಿಗೆ ವಾಸವಿದ್ದರು.
ಬೆಳಿಗ್ಗೆ ಪತಿ ಹಾಗೂ ಮಗ ಹೊರಗಡೆ ತೆರಳಿದ್ದರು. ಮಹಿಳೆಯು ಗ್ಯಾಸ್ ಒಲೆ ಮೇಲೆ ಸಾಂಬಾರ್ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಲೀಕ್ ಆಗಿ, ರೆಗ್ಯುಲೇಟರ್ ಗೆ ಹೊತ್ತಿಕೊಂಡಿದೆ. ನಂದಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.
ಆದರೆ ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಅವರು ಮನೆಯಿಂದ ಹೊರ ಓಡಿ ಬಂದಿದ್ದು, ಕೆಲ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಕಿವಿಗಡಚಿಕ್ಕುವ ಶಬ್ದವು ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shimoga, Feb 24: The cylinder regulator caught fire while making sambar, the gas cylinder exploded, and the walls of the house collapsed. The incident took place at Kotegangur on the outskirts of Shimoga city at around 9 am on February 24.
The incident took place in Adake Mandi workers colony. As the gas cylinder caught fire, the occupants of the house ran out. Locals have informed that due to this they have escaped from potential disaster.
