Shivamogga - Harihar railway line should not be closed : Should the central and state governments take note? ಶಿವಮೊಗ್ಗ – ಹರಿಹರ ರೈಲ್ವೆ ಮಾರ್ಗ ಸ್ಥಗಿತವಾಗದಿರಲಿ : ಕೇಂದ್ರ, ರಾಜ್ಯ ಸರ್ಕಾರಗಳು ಗಮನಿಸಲಿ?

shimoga – harihara railway | ಶಿವಮೊಗ್ಗ – ಹರಿಹರ ರೈಲ್ವೆ ಮಾರ್ಗ ಸ್ಥಗಿತವಾಗದಿರಲಿ : ಕೇಂದ್ರ, ರಾಜ್ಯ ಸರ್ಕಾರಗಳು ಗಮನಿಸಲಿ?

ಶಿವಮೊಗ್ಗ, ಆಗಸ್ಟ್ 20: ಮಲೆನಾಡು ಹಾಗೂ ಮಧ್ಯ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ, ಶಿವಮೊಗ್ಗ – ಹರಿಹರ  ನಡುವೆ 78 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯು, ಕೇಂದ್ರ – ರಾಜ್ಯ ಸರ್ಕಾರಗಳ ನಡುವಿನ ಸಮನ್ವಯತೆ ಕೊರತೆಯಿಂದ ಸ್ಥಗಿತಗೊಳ್ಳುವಂತಾಗಿದೆ!

ಇತ್ತೀಚೆಗೆ ಸಂಸತ್ ಅಧಿವೇಶನದ ವೇಳೆ, ದಾವಣಗೆರೆ ಕ್ಷೇತ್ರದ ಲೋಕಸಭೆ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು, ಇಲ್ಲಿಯವರೆಗೂ ಯೋಜನೆಗೆ ರಾಜ್ಯ ಸರ್ಕಾರ ಭೂ ಸ್ವಾದೀನ ಪಡಿಸಿಕೊಟ್ಟಿಲ್ಲ. ಈ ಕಾರಣದಿಂದ ಸದರಿ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದರಿ ರೈಲ್ವೆ ಯೋಜನೆಯು ಅನುಷ್ಠಾನಗೊಂಡರೆ ಮಧ್ಯ ಕರ್ನಾಟಕದ ಆರ್ಥಿಕ, ಕೈಗಾರಿಕೆ, ಸಂಪರ್ಕ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗೆ ಸಾಕ್ಷಿಯಾಗುತ್ತಿತ್ತು. ನಾಗರೀಕರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ರೈಲ್ವೆ ಸಂಪರ್ಕ ವಂಚಿತ ಹೊನ್ನಾಳ್ಳಿ, ಮಲೆಬೆನ್ನೂರು ಭಾಗಗಳಿಗೆ ಸಹಕಾರಿಯಾಗುತ್ತಿತ್ತು.

ಆದರೆ ಯೋಜನೆಗೆ ಅನುಮತಿ ಲಭಿಸಿ ಒಂದೂವರೆ ದಶಕವಾಗುತ್ತಾ ಬಂದರೂ ಇಲ್ಲಿಯವರೆಗೂ ಅನುಷ್ಠಾನವಾಗಿಲ್ಲ. ಕೇಂದ್ರ – ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಮಹತ್ವದ ಯೋಜನೆಯೊಂದು ಹಳ್ಳ ಹಿಡಿಯುವಂತಾಗಿದೆ.

ಅನುಮತಿ : 2009 -10 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ಶಿವಮೊಗ್ಗ – ಹರಿಹರ ಯೋಜನೆ ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಂದು ಕೇಂದ್ರ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರು ಯೋಜನೆಗೆ ಅನುಮತಿ ನೀಡಿದ್ದರು.

ಶೇ. 50 – 50 ಅನುಪಾತದಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದ್ದವು. 2009 – 10 ರಲ್ಲಿ ಮಾರ್ಗ ನಿರ್ಮಾಣದ ಸರ್ವೆ ನಡೆಸಲಾಗಿತ್ತು. ಹಾಲಿ ಶಿವಮೊಗ್ಗ – ಹರಿಹರ ರಸ್ತೆಗೆ ಸಮನಾಂತರವಾಗಿ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

ಆದರೆ ಶಿವಮೊಗ್ಗ ತಾಲೂಕಿನ ಕೆಲ ಗ್ರಾಮಗಳ ರೈತರು , ತಮ್ಮ ಗ್ರಾಮಗಳ ಮೂಲಕ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಡಕೆ ತೋಟಗಳಿಗೆ ಹಾನಿಯಾಗಲಿದೆ ಎಂದು ದೂರಿ ಪ್ರತಿಭಟಿಸಿದ್ದರು.

ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ಸಮೀಕ್ಷೆ ನಡೆಸಲಾಗಿತ್ತು. ಶಿವಮೊಗ್ಗದ ಹೊರವಲಯ ಕೋಟೆಗಂಗೂರು, ಬಸವನಗಂಗೂರು, ಅಬ್ಬಲಗೆರೆ, ಕೊಮ್ಮನಾಳು ಮೂಲಕ ಹೊನ್ನಾಳ್ಳಿ, ಮಲೆಬೆನ್ನೂರು ಮಾರ್ಗವಾಗಿ ರೈಲ್ವೆ ಲೈನ್ ನಿರ್ಮಾಣಕ್ಕೆ ಸರ್ವೇ ಮಾಡಲಾಗಿತ್ತು.

ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮತಿ ನೀಡಿತ್ತು. ಮಾರ್ಗ ನಿರ್ಮಾಣಕ್ಕೂ ಪ್ರಾರಂಭಿಕ ಹಂತದ ಅನುದಾನ ಘೋಷಿಸಿತ್ತು. ಆದರೆ ಮೂಲ ಒಪ್ಪಂದದಂತೆ ರಾಜ್ಯ ಸರ್ಕಾರ ಮಾರ್ಗ ನಿರ್ಮಾಣಕ್ಕೆ ಭೂ ಸ್ವಾದೀನ ಪಡಿಸಿ ಕೊಡಲಿಲ್ಲ.

ಮತ್ತೊಂದೆಡೆ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗದತ್ತ ಚಿತ್ತ ಹರಿಸಿದರು. ಇದರಿಂದ ಶಿವಮೊಗ್ಗ – ಹರಿಹರ ಮಾರ್ಗ ಸಂಪೂರ್ಣ ನೆನೆಗುದಿಗೆ ಬೀಳುವಂತಾಯಿತು.

ಗಮನಿಸಲಿ: ಶಿವಮೊಗ್ಗ – ಹರಿಹರ ಮಾರ್ಗ ನಿರ್ಮಾಣದಿಂದ, ರೈಲ್ವೆ ಇಲಾಖೆಗೆ ಆರ್ಥಿಕವಾಗಿ ಸಾಕಷ್ಟು ಲಾಭದಾಯಕವಾಗಲಿದೆ. ಹಾಗೆಯೇ ಶಿವಮೊಗ್ಗ ರೈಲ್ವೆ ಪ್ರಯಾಣಿಕರಿಗೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಸಂಪರ್ಕ ಸುಲಭವಾಗಲಿದೆ. ಉತ್ತರ ಭಾರತ ರಾಜ್ಯಗಳ ಸಂಪರ್ಕವೂ ಲಭಿಸಲಿದೆ.

ಹಾಗೆಯೇ ಹೊನ್ನಾಳ್ಳಿ, ಮಲೆಬೆನ್ನೂರು ಭಾಗದ ನಾಗರೀಕರಿಗೆ ರೈಲ್ವೆ ಸಂಪರ್ಕವೂ ದೊರಕಲಿದೆ. ಈ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸದರಿ ಯೋಜನೆಯ ಅನುಷ್ಠಾನಕ್ಕೆ ಕಾಲಮಿತಿಯೊಳಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

Shivamogga, August 20: The 78 km long railway line construction project between Shivamogga and Harihar, which will connect Malnad and Central Karnataka, is facing a standstill due to lack of coordination between the Central and State governments!

When Yediyurappa was the CM in 2009-10, he had requested the central government to implement the Shivamogga-Harihar project. Mamata Banerjee, who was the Union Railway Minister at that time, had given permission for the project.

Mysterious disappearance of student from Agumbe school hostel: Police department appeals for help in finding him ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ Previous post agumbe news | ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ
All preparedness for caste survey in Shivamogga district : What did the DC say? ಶಿವಮೊಗ್ಗ ಜಿಲ್ಲೆಯಲ್ಲಿ ಜಾತಿ ಸಮೀಕ್ಷೆಗೆ ಸಕಲ ಸಿದ್ದತೆ : ಡಿಸಿ ಹೇಳಿದ್ದೇನು? Next post shimoga dc | ಆಗಸ್ಟ್ 27 ರಿಂದ ಸೆಪ್ಟೆಂಬರ್ 15 ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ!