
shimoga palike | ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ, ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 18: ಸರಿಸುಮಾರು ಒಂದೇ ವೇಳೆಗೆ ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗಳ ಪರಿಷ್ಕರಣೆ ಆರಂಭವಾಗಿತ್ತು. ಸದರಿ ಪ್ರಕ್ರಿಯೆ ತುಮಕೂರಲ್ಲಿ ವೇಗದಲ್ಲಿ ಸಾಗಿದೆ. ಅಂತಿಮ ಹಂತಕ್ಕೆ ಬರಲಾರಂಭಿಸಿದೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಆಮೆವೇಗದಲ್ಲಿ ಸಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯಲಾರಂಭಿಸಿದೆ..!
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಪರಮೇಶ್ವರ್ ಅವರ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತ ಸಮರೋಪಾದಿಯಲ್ಲಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ನಡೆಸಿದೆ. ಸದ್ಯ ತುಮಕೂರು ನಗರ ವ್ಯಾಪ್ತಿ 48. 06 ಚದರ ಕಿಲೋ ಮೀಟರ್ ಇದೆ. ಹೊಸ ಪ್ರದೇಶಗಳ ಸೇರ್ಪಡೆಯಿಂದ 174. 536 ಚದರ ಕಿ. ಮೀ. ಗೆ ಹೆಚ್ಚಾಗಲಿದೆ.
ಶಿವಮೊಗ್ಗದಲ್ಲಿ ಅಧೋಗತಿ! : ತುಮಕೂರು ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೂ ಮುನ್ನವೇ, ರಾಜ್ಯ ಸರ್ಕಾರದ ಸೂಚನೆಯಂತೆ ಶಿವಮೊಗ್ಗ ಪಾಲಿಕೆ ಆಡಳಿತ ಪರಿಷ್ಕರಣೆ ಆರಂಭಿಸಿತ್ತು. ಆದರೆ ಇಲ್ಲಿ ಮಾತ್ರ ಪರಿಷ್ಕರಣೆ ಪ್ರಕ್ರಿಯೆ ಆಮೆವೇಗದಲ್ಲಿ ಸಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸದ್ಯ ಪರಿಷ್ಕರಣೆಗೆ ಸಂಬಂಧಿಸಿದ ಕಡತಗಳು ಧೂಳು ಹಿಡಿಯಲಾರಂಭಿಸಿವೆ!
1995 ರಲ್ಲಿ ಅಂದಿನ ನಗರಸಭೆ ಆಡಳಿತದ ವೇಳೆ, ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ, ಬರೋಬ್ಬರಿ 30 ವರ್ಷಗಳಿಂದ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಪಾಲಿಕೆಯಾಗಿ ಮೇಲ್ದರ್ಜೆಗೇರಿದ ವೇಳೆಯೂ ವಿಸ್ತರಣೆಯಾಗಿರಲಿಲ್ಲ. ಹಾಲಿ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಸರಿಸುಮಾರು 75 ಚದರ ಕಿ.ಮೀ. ವಿಸ್ತೀರ್ಣವಿದೆ.
ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಉದ್ದೇಶಿಸಿರುವ ಪ್ರದೇಶಗಳನ್ನು ಪರಿಗಣಿಸಿದರೆ, ಅಂದಾಜು 150 ಚದರ ಕಿ.ಮೀ. ಹೆಚ್ಚಾಗಲಿದೆ. ತುಮಕೂರು ಪಾಲಿಕೆಗೆ ಹೋಲಿಸಿದರೆ ಇದು ಕಡಿಮೆಯಿದೆ. ಈ ನಡುವೆ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ಬಡಾವಣೆಗಳನ್ನು, ಪರಿಷ್ಕರಣೆ ವೇಳೆ ಕೈಬಿಟ್ಟಿದ್ದು, ಸದರಿ ಬಡಾವಣೆಗಳನ್ನು ಕೂಡ ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಕವಿತಾ ಯೋಗಪ್ಪನವರ್ ಪಾಲಿಕೆ ಆಯುಕ್ತರಾಗಿದ್ದ ವೇಳೆ ಪರಿಷ್ಕರಣೆಯ ಮೊದಲ ಹಂತದ ವರದಿ ಸಿದ್ದಪಡಿಸಿದ್ದರು. ಜಿಲ್ಲಾಡಳಿತಕ್ಕೂ ಸಲ್ಲಿಸಿದ್ದರು. ಡಿಸಿ ಕಚೇರಿ ಕೋರಿದ್ದ ಹೆಚ್ಚಿನ ವಿವರಗಳನ್ನು ಕೂಡ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕೆಲ ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದ್ದರು.
ಹಾಲಿ ಸಿದ್ದಪಡಿಸಿರುವ ಪರಿಷ್ಕರಣೆ ವರದಿ ಹಾಗೂ ಬಡಾವಣೆಗಳ ಸೇರ್ಪಡೆಗೆ ನಾಗರೀಕರು ಸಲ್ಲಿಸಿರುವ ಮನವಿಗಳ ಬಗ್ಗೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ಆದರೆ ಆದರೆ ಡಿಸಿ ಸೂಚಿಸಿ ಮೂರ್ನಾಲ್ಕು ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತ ವರದಿ ಸಲ್ಲಿಸಿಲ್ಲ.
ಮತ್ತೊಂದೆಡೆ, ಜನಪ್ರತಿನಿಧಿಗಳು ಕೂಡ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯತ್ತ ಚಿತ್ತ ಹರಿಸುತ್ತಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ಕಾರಣದಿಂದ ಪ್ರಮುಖ ಆಡಳಿತಾತ್ಮಕ ವಿಷಯವೊಂದು ಮೂಲೆಗುಂಪಾಗುವಂತಾಗಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸಿತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವರೇ ಗಮನಿಸಿ…?!
*** ತುಮಕೂರು ಜಿಲ್ಲಾ ಉಸ್ತುವಾಸಿ ಸಚಿವರೂ ಆದ ಗೃಹ ಸಚಿವ ಜಿ ಪರಮೇಶ್ವರ್ ಅವರ ಕಾರಣದಿಂದ, ತುಮಕೂರು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯ ಹಂತದಲ್ಲಿದೆ. ಆದರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯು ಸಂಪೂರ್ಣ ವಿಳಂಬವಾಗಿದ್ದು, ಸದ್ಯ ಮೂಲೆಗುಂಪಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಗಮನಹರಿಸಬೇಕಾಗಿದೆ. 30 ವರ್ಷಗಳ ನಂತರ ನಡೆಯುತ್ತಿರುವ ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಬಗ್ಗೆ ಸರ್ಕಾರಕ್ಕೆ ಕಾಲಮಿತಿಯೊಳಗೆ ವರದಿ ಸಲ್ಲಿಸುವ ಕುರಿತಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
shivamogga, sep 19 : The revision of the boundaries of Shivamogga and Tumkur Municipal Corporations began at about the same time. The process has been moving at a fast pace in Tumkur. It has started reaching its final stage. But only in Shivamogga has it been moving at a snail’s pace.