shimoga news | ಶಿವಮೊಗ್ಗ : ಯಾರಿಗೆ ‘ಮಂತ್ರಿ ಯೋಗ…?’

congress mla

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜುಲೈ 01: ರಾಜ್ಯ ವಿಧಾನ ಮಂಡಲ ಅಧಿವೇಶನ ಜುಲೈ 20 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಸಚಿವ ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ. ಇದರಿಂದ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಾಸಕರು, ಭಾರೀ ಕಸರತ್ತು – ಲಾಬಿ ಆರಂಭಿಸಿದ್ದಾರೆ.

ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರಲ್ಲಿ, ಯಾರಿಗೆ ಮಂತ್ರಿಯಾಗುವ ಯೋಗ ದೊರಕಲಿದೆ ಎಂಬ ಕುತೂಹಲ ಮನೆಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ‘ಕೈ’ ಪಾಳೇಯದಲ್ಲಿ ಬಿರುಸಿನ ಚರ್ಚೆಗಳು ನಡೆಯಲಾರಂಭಿಸಿವೆ. ಶಾಸಕರ ಆಪ್ತರು – ಬೆಂಬಲಿಗರು, ‘ನಮ್ಮ ನಾಯಕರೇ ಸಚಿವರಾಗಲಿದ್ದಾರೆ..’ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ.

ಲೆಕ್ಕಾಚಾರವೇನು? : ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ, ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪಗೆ ಸಂಪುಟ ದರ್ಜೆಯ ಸಚಿವರಾಗುವ ಅವಕಾಶ ಲಭಿಸಿತ್ತು. ಇದರಿಂದ ಸಿಎಂ ಡಿ ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ, ಭದ್ರಾವತಿ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ ಅಥವಾ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರಲ್ಲಿ ಓರ್ವರಿಗೆ ಸಚಿವ ಸ್ಥಾನದ ಅವಕಾಶ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿತ್ತು.

ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹಾಗೂ ‘ಕೈ’ ಪಾಳೇಯದ ಉನ್ನತ ಮೂಲಗಳ ಮಾಹಿತಿ ಅನುಸಾರ, ಮಧು ಬಂಗಾರಪ್ಪರವರು ಹೈಕಮಾಂಡ್ ಹಂತದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ನಾನಾ ಕಾರಣಗಳ ಹಿನ್ನೆಲೆಯಲ್ಲಿ, ದೆಹಲಿಯ ಕೆಲ ನಾಯಕರು ಕೂಡ ಮಧು ಪರ ಒಲವು ವ್ಯಕ್ತಪಡಿಸಲಾರಂಭಿಸಿದ್ದಾರೆಂಬ ಮಾಹಿತಿಗಳು ಕೇಳಿಬರುತ್ತಿವೆ.

ಕುತೂಹಲ : ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಹೊಸಬರಿಗೆ ಅವಕಾಶ ನೀಡುವ ನಿಲುವು ತಳೆದರೆ, ಮಧು ಬಂಗಾರಪ್ಪಗೆ ಮತ್ತೆ ಮಂತ್ರಿಯಾಗುವ ಅವಕಾಶ ವಿರಳವಾಗಲಿದೆ. ಬಿ ಕೆ ಸಂಗಮೇಶ್ವರ್ ಹಾಗೂ ಬೇಳೂರು ಗೋಪಾಲಕೃಷ್ಣರಲ್ಲಿ ಓರ್ವರು ಮಂತ್ರಿಯಾಗುವುದು ನಿಶ್ಚಿತವಾಗಿದೆ.

ಈಗಾಗಲೇ ಬೇಳೂರು ಗೋಪಾಲಕೃಷ್ಣರವರು ಬಹಿರಂಗವಾಗಿಯೇ ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆನೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಬಿ ಕೆ ಸಂಗಮೇಶ್ವರ್ ರವರು ಮೌನವಾಗಿಯೇ ಕಾರ್ಯ ಸಾಧನೆಗಿಳಿದಿದ್ದಾರೆ. ಹಿರಿತನದ ಆಧಾರ ಹಾಗೂ ಈ ಹಿಂದೆ ನೀಡಿದ್ದ ಭರವಸೆಯಂತೆ, ತಮಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಸಿಎಂ ಡಿ ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಯಾರಿಗೆ ಮಂತ್ರಿಯಾಗುವ ಅವಕಾಶ ಲಭ್ಯವಾಗಲಿದೆ ಎಂಬುವುದು ಊಹೆಗೆ ನಿಲುಕದಂತಾಗಿದೆ. ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.

ನಿಗಮ ಮಂಡಳಿಗಳ ಮೇಲೆ ಕಣ್ಣು..!

*** ಸಚಿವ ಸಂಪುಟ ವಿಸ್ತರಣೆ ಹಾಗೂ ಮುಂಗಾರು ವಿಧಾನಮಂಡಲ ಅಧಿವೇಶನದ ನಂತರ, ನಿಗಮ – ಮಂಡಳಿಗಳಿಗೆ ಹೊಸ ಅಧ್ಯಕ್ಷರು – ಸದಸ್ಯರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳೇಯದಿಂದ ಕೇಳಿಬರುತ್ತಿವೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನ ಹಲವು ಮುಖಂಡರು ಪ್ರಮುಖ ನಿಗಮ – ಮಂಡಳಿಗಳ ಅಧ್ಯಕ್ಷ – ಸದಸ್ಯರಾಗಲು ಈಗಿನಿಂದಲೇ ಲಾಬಿ ಆರಂಭಿಸಿರುವ ಮಾಹಿತಿಗಳು ಕೇಳಿಬರುತ್ತಿವೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *