shimoga news | ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿವೆ ‘ಭಾರತ್ ಜೋಡೋ ಯುವಕ ಸಂಘ’

‘Bharat Jodo Yuvaka Sangha’ dc meeting news

ಶಿವಮೊಗ್ಗ (shivamogga), ಜುಲೈ 22 : ರಾಜ್ಯ ಸರ್ಕಾರವು ಯುವಜನರಲ್ಲಿ ಕ್ರೀಡೆ, ವೈಜ್ಞಾನಿಕ ಮನೋಭಾವ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಸಂವಿಧಾನದ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಸದುದ್ದೇಶದಿಂದ ರಾಜ್ಯಾದ್ಯಂತ ಹತ್ತು ಸಾವಿರ ‘ಭಾರತ್ ಜೋಡೋ ಯುವಕ ಸಂಘ’ ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ “ಭಾರತ್ ಜೋಡೋ ಯುವಕ ಸಂಘ” ಗಳ ರಚನೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅ‍ಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಂಘದ ಸದಸ್ಯರಾಗಲು ಕನಿಷ್ಠ 16 ರಿಂದ ಗರಿಷ್ಠ 35 ವರ್ಷದೊಳಗಿನ ಯುವಕ-ಯುವತಿಯರಿಗೆ ಅವಕಾಶವಿದೆ. ಪ್ರತಿ ಸಂಘದಲ್ಲಿ ಕನಿಷ್ಠ 100 ರಿಂದ 250 ಯುವ ಸದಸ್ಯರಿರಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಹಾಗೂ ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ (4,000 ದಿಂದ 10,000 ಜನರಿಗೆ ಒಂದು) ಸಂಘಗಳನ್ನು ರಚಿಸಬಹುದಾಗಿದೆ. ಪ್ರತಿ ಸಂಘಕ್ಕೆ ಸರ್ಕಾರವು ವಾರ್ಷಿಕವಾಗಿ 10 ಲಕ್ಷ ರೂ. ಅನುದಾನವನ್ನು ಮೂರು ಕಂತುಗಳಲ್ಲಿ ಸಂಘದ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲಿದೆ ಎಂದರು.

ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ. ಭಾರತ್‌ ಜೋಡೋ ಯುವ ಸಂಘಗಳ ಮೂಲಕ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಅವರನ್ನು ಸಬಲೀಕರಣಗೊಳಿಸಿ, ನಾಡಿನ ಸತ್ಪ್ರಜೆಗಳಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಅನುದಾನದ ಹಣವನ್ನು ಸ್ಪೋರ್ಟ್ಸ್ ಮೆಟೀರಿಯಲ್ಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಗ್ರಂಥಾಲಯ ಅಥವಾ ಸಂಘದ ಆಫೀಸ್‌ಗೆ ಬೇಕಾದ ಮೂಲಸೌಕರ್ಯಕ್ಕೆ ಮಾತ್ರ ಬಳಸಬಹುದು. ತರಬೇತುದಾರರಿಗೆ ಗೌರವಧನವಿದೆ. ಪ್ರತಿ ಸಂಘದಲ್ಲಿ ಯುವಕರಿಗೆ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದರು.

ಸಂಘದಲ್ಲಿ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿ ರಚನೆಯಾಗಿರಲಿದೆ. ಈ ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರು ಇರಲಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಮೀಸಲಾತಿ ಕಡ್ಡಾಯ. ನಿಯಮಾನುಸಾರ ರಚನೆಗೊಂಡ ಸಮಿತಿಗೆ 2ವರ್ಷಗಳ ಅಧಿಕಾರಾವಧಿ ನಿಗಧಿಪಡಿಸಿದೆ. ಈ ಸದಸ್ಯರು ಮುಂದಿನ ಅವಧಿಗೆ ಮುಂದುವರೆಯುವಂತಿಲ್ಲ.

ಸಂಘವು ಅಳವಡಿಸಿಕೊಂಡಿರುವ ಪ್ರಮುಖ ಚಟುವಟಿಕೆಗಳನ್ನು ಮಾಡಬೇಕು. ವಿಶೇಷವಾಗಿ ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಸಾಂಪ್ರದಾಯಿಕ ಆಟಗಳ ಆಯೋಜನೆ. ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ, ಕಲ್ಯಾಣಿಗಳ ಸ್ವಚ್ಛತೆ, ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು.

ಪರಿಸರ ಸಂರಕ್ಷಣೆ ವಿಚಾರದಲ್ಲಿ ಸಸಿ ನೆಡುವುದು, ಹವಾಮಾನ ಬದಲಾವಣೆ ಜಾಗೃತಿ ನಡೆಸಬೇಕು. ರಕ್ತದಾನ ಶಿಬಿರಗಳು, ಮಾನಸಿಕ ಆರೋಗ್ಯ ಜಾಗೃತಿ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾವೈಕ್ಯತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಇದರ ಜೊತೆ ಸ್ಕಿಲ್‌ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ನೀಡಬೇಕು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಮಹಾತ್ಮರ ಜಯಂತಿಗಳ ಆಚರಣೆ ಹಾಗೂ ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸೈಬರ್ ಸುರಕ್ಷತೆ ಜಾಗೃತಿ, ಸಂಚಾರ ನಿಯಮಗಳ ಜಾಗೃತಿ, ಕೃಷಿ ನಾವೀನ್ಯತೆ ಹಾಗೂ ಮಾದಕ ವಸ್ತುಗಳ ವಿರೋಧಿ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುವುದು ಎಂದವರು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌,  ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌, ಕುವೆಂಪು ವಿವಿ. ಎನ್.ಎಸ್.ಎಸ್. ಸಂಯೋಜಕಿ ಶ್ರೀಮತಿ ಶುಭಾ ಮರವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘Bharat Jodo Yuvaka Sangha’ to be established in Shivamogga district | Shivamogga, July 22: The state government has issued guidelines to establish ten thousand ‘Bharat Jodo Yuvaka Sangha’ across the state with the good intention of instilling sports, scientific attitude, culture, social harmony, constitutional values ​​and leadership qualities among the youth. It is intended to form associations in urban, town and rural areas of the district, said Deputy Commissioner Prabhulinga Kavalikatti.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *