ಶಿವಮೊಗ್ಗ (shivamogga), ಆಗಸ್ಟ್ 10: ಶಿವಮೊಗ್ಗ ನಗರದ ಕುವೆಂಪು ರಸ್ತೆಯ ವಾಸವಿ ವೃತ್ತದಿಂದ ಗಾಂಧಿ ನಗರದೆಡೆಗೆ ಸಾಗುವ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕದ ಗಾಂಧಿ ನಗರ ಮುಖ್ಯ ರಸ್ತೆಯಲ್ಲಿ, ದಿನದಿಂದ ದಿನಕ್ಕೆ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.
ಸದರಿ ರಸ್ತೆಯಲ್ಲಿ ಭಾರೀ ಪ್ರಮಾಣದ ಜನ – ವಾಹನ ಸಂಚಾರ ದಟ್ಟಣೆಯಿದೆ. ಆದರೆ ಮೊದಲೇ ಕಿರಿದಾಗಿದ್ದ ಸದರಿ ರಸ್ತೆಯು, ಸ್ಮಾರ್ಟ್ ಸಿಟಿ ಅಭಿವೃದ್ದಿ ಕಾಮಗಾರಿಯ ನಂತರ ಮತ್ತಷ್ಟು ಕಿರಿದಾಗಿದೆ.
ಇದರ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರ ಮತ್ತಷ್ಟು ದುಸ್ತರವಾಗುತ್ತಿದೆ. ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯ ಎಂಬಂತಾಗಿದೆ. ಪಾದಚಾರಿಗಳು ರಸ್ತೆ ನಡುವೆಯೇ ಓಡಾಡುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಮತ್ತೊಂದೆಡೆ ಸದರಿ ರಸ್ತೆಯ ಜಿಪಂ ಕಚೇರಿ ಕಟ್ಟಡದ ಸಮೀಪ ಅಭಿವೃದ್ದಿಗೊಳಿಸಿರುವ ಕನ್ಸರ್’ವೆನ್ಸಿಯು, ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಅಸ್ವಚ್ಛತೆ ಆವರಿಸಿದೆ. ಸದರಿ ರಸ್ತೆಗೆ ಹೊಂದಿಕೊಂಡಂತಿರುವ ಚನ್ನಪ್ಪ ಲೇಔಟ್ ನಲ್ಲಿಯೂ ಇದೇ ಸ್ಥಿತಿಯಿದೆ. ತಕ್ಷಣವೇ ಪಾಲಿಕೆ ಆಡಳಿತ ಹಾಗೂ ಟ್ರಾಫಿಕ್ ಪೊಲೀಸರು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
Shivamogga: Will the corporation and traffic police divert traffic to the road next to the Zilla Panchayat office? | Shivamogga, August 10: Local citizens have complained that the Gandhi Nagar main road, which runs from Vasavi Circle on Kuvempu Road in Shivamogga city towards Gandhi Nagar, next to the Zilla Panchayat office, is becoming increasingly difficult for people and vehicles to pass through.

