ಶಿವಮೊಗ್ಗ (shimoga), ಆಗಸ್ಟ್ 31 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯು ಮತ್ತಷ್ಟು ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗ ತಲುಪುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖ ಚಹರೆ ದೃಢೀಕರಣ (ಫೇಶಸ್ ಅಥೆಂಟಿಕೇಷನ್) ಮೂಲಕ ಮರುಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮರಣ ಹೊಂದಿದ, ವಲಸೆ ಹೋದ ಹಾಗೂ ಐ.ಟಿ ಮತ್ತು ಜಿ.ಎಸ್.ಟಿ ತೆರಿಗೆ ಪಾವತಿಸಿರುವ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಟ್ಟು, ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಮುಂದುವರಿಸಲು ಈ ಮರುಪರಿಶೀಲನಾ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಮನೆ ಮನೆಗೆ ಭೇಟಿ ನೀಡಲಿವೆ ತಂಡಗಳು: ಫಲಾನುಭವಿಗಳ ಮರು ಪರಿಶೀಲನೆಯನ್ನು ‘ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್’ (ಇಡಿಸಿಎಸ್) ನಿರ್ದೇಶನಾಲಯ ಅಭಿವೃದ್ಧಿಪಡಿಸಿದ ವೆಬ್/ಮೊಬೈಲ್ ಆಪ್ ಮೂಲಕ ನಡೆಸಲಾಗುತ್ತದೆ. ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಸರ್ಕಾರಿ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ.
ಫಲಾನುಭವಿಗಳು ನಮೂನೆಯನ್ನು ಭರ್ತಿ ಮಾಡಿ ಅದೇ ಭೇಟಿಯ ಸಮಯದಲ್ಲಿ ಹಿಂತಿರುಗಿಸಬೇಕು. ಸಿಬ್ಬಂದಿಗಳು ಸ್ಥಳದಲ್ಲೇ ಫಲಾನುಭವಿಯ ಫೋಟೋ, ಜಿ.ಪಿ.ಎಸ್ ನಿರ್ದೇಶಾಂಕಗಳು, ಮುಖದ ದೃಢೀಕರಣ ಹಾಗೂ ಮತದಾರರ ಗುರುತಿನ ಚೀಟಿ (ಎಪಿಕ್) ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯನ್ನು ಒಂದು ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಆಡಳಿತಾತ್ಮಕ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ.
ಮನೆ ಭೇಟಿಯ ವೇಳೆ ಮುಖ ದೃಢೀಕರಣ ವಿಫಲವಾದರೆ ಅಥವಾ ಲಭ್ಯವಿಲ್ಲದಿದ್ದರೆ, ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ (ಸಿಎಸ್ ಸಿ) ಭೇಟಿ ನೀಡಿ ಬಯೋಮೆಟ್ರಿಕ್ ಪೂರ್ಣಗೊಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಜುಲೈ 1 ರ ನಂತರ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿರುವ ಬಯೋಮೆಟ್ರಿಕ್ ದತ್ತಾಂಶವನ್ನೂ ಆಹಾರ ಇಲಾಖೆಯಿಂದ ಪಡೆದು ಪರಿಶೀಲಿಸಲಾಗುತ್ತದೆ.
ಧನಸಹಾಯ: ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷಗಳು ಪೂರೈಸಿದ್ದು, ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಾಗಿದ್ದು “ಶಿವಮೊಗ್ಗ ಜಿಲ್ಲೆಯಲ್ಲಿ 2023 ರ ಆಗಸ್ಟ್ 30 ರಿಂದ ಇಲ್ಲಿಯವರೆಗೆ ಒಟ್ಟು 32 ಕಂತುಗಳಲ್ಲಿ ತಲಾ ಒಬ್ಬರಿಗೆ ರೂ.64,000 ರಂತೆ ಒಟ್ಟು ರೂ. 3,78,031 ಕೋಟಿ ಫಲಾನುಭವಿಗಳಿಗೆ (ಖಾತೆದಾರರಿಗೆ) ಒಟ್ಟು ರೂ.2,391,19,86,000 (ರೂ. 2,391 ಕೋಟಿಗೂ ಅಧಿಕ) ಹಣವನ್ನು ಡಿ.ಬಿ.ಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
Important information about the Grihalakshmi scheme: Attention beneficiaries..! | Shivamogga, August 31: In order to ensure that the ‘Grihalakshmi’ scheme, one of the ambitious guarantee schemes of the state government, reaches the eligible beneficiaries in a more transparent manner, the state government has issued an official order to conduct a re-verification of all beneficiaries through biometric and facial authentication, said C.S. Chandrabhupal, District President of the District Guarantee Scheme Implementation Authority.

