ಶಿವಮೊಗ್ಗ (shivamogga), ಅಕ್ಟೋಬರ್ 13: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಜಾಗ ಒತ್ತುವರಿ ಮಾಡಿಕೊಂಡು, ಲೇಔಟ್ ನಿರ್ಮಾಣ ಮಾಡುತ್ತಿರುವ ಪ್ರಕರಣವೊಂದು ಶಿವಮೊಗ್ಗದ ಕುವೆಂಪು ನಗರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಸ್ಥಳೀಯ ನಾಗರಿಕರ ದೂರಿನ ಮೇರೆಗೆ ಅಕ್ಟೋಬರ್ 13 ರ ಸಂಜೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ ಜಿ ಮಧುಸೂದನ್, ಆಯುಕ್ತ ಬಿ ಆರ್ ಮಂಜುನಾಥ್ ಅವರು ಕುವೆಂಪು ನಗರಕ್ಕೆ ಭೇಟಿಯಿತ್ತು ಜಾಗ ವೀಕ್ಷಣೆ ನಡೆಸಿದರು. ದಾಖಲೆಗಳ ಪರಿಶೀಲನೆ ನಡೆಸಿದರು. ಇದೆ ವೇಳೆ ಸ್ಥಳೀಯ ನಿವಾಸಿಗಳು ಭೇಟಿಯಾಗಿ ಅಹವಾಲು ತೋಡಿಕೊಂಡರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ ಜಿ ಮಧುಸೂದನ್ ಅವರು ಮಾತನಾಡಿ, ‘ಕುವೆಂಪು ನಗರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಬಡಾವಣೆ ಅಭಿವೃದ್ದಿಪಡಿಸುತ್ತಿದ್ದಾರೆಂದು ಸ್ಥಳೀಯ ನಿವಾಸಿಗಳು ದೂರಿದ್ದರು. ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಇದರ ಆಧಾರದ ಮೇಲೆ ಪ್ರಾಧಿಕಾರದ ಅಧಿಕಾರಿಗಳು ಕಚೇರಿ ದಾಖಲೆ ಪರಿಶೀಲಿಸಿದಾಗ, ನಾಗರಿಕರ ಆರೋಪದಲ್ಲಿ ಸತ್ಯಾಂಶವಿರುವುದು ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಯುಕ್ತರು, ಟಿಪಿಎಂ, ಸರ್ವೇಯರ್ ಅವರೊಂದಿಗೆ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಲಾಗಿದೆ. ಸದರಿ ಜಾಗವನ್ನು ಪ್ರಾಧಿಕಾರದ ವಶಕ್ಕೆ ಪಡೆಯಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಆಯುಕ್ತ ಬಿ ಆರ್ ಮಂಜುನಾಥ್ ಅವರು ಮಾತನಾಡಿ, ‘ಸದರಿ ಜಾಗವು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. 35 ಗುಂಟೆಯಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಂದಾಜು 6 ಕೋಟಿ ರೂ. ಮೌಲ್ಯದ್ದಾಗಿದೆ. ಮತ್ತೊಮ್ಮೆ ಸರ್ವೇ ನಡೆಸಿ, ಪ್ರಾಧಿಕಾರಕ್ಕೆ ಸೇರಿದ ಜಾಗ ವಶಕ್ಕೆ ಪಡೆಯಲಾಗುವುದು.
ಪ್ರಾಧಿಕಾರಕ್ಕೆ ಸೇರಿದ ಜಾಗ ಯಾರೇ ಒತ್ತುವರಿ ಮಾಡಿದ್ದರೂ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಅನದಿಕೃತ ಲೇಔಟ್ ನಿರ್ಮಾಣ ಮಾಡುವವರ ವಿರುದ್ದವೂ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ಮಾಜಿ ಕಾರ್ಪೋರೇಟರ್ ಧೀರರಾಜ್ ಹೊನ್ನವಿಲೆ ಅವರು ಮಾತನಾಡಿ, ‘ಪ್ರಾಧಿಕಾರಕ್ಕೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಜಾಗ ಒತ್ತುವರಿಯಾಗಿದೆ. ಇದನ್ನು ವಶಕ್ಕೆ ಪಡೆಯಲು ಮುಂದಾಗಿರುವ ಪ್ರಾಧಿಕಾರದ ನೂತನ ಅಧ್ಯಕ್ಷ ಸಿ ಜಿ ಮಧುಸೂದನ್ ಹಾಗೂ ಆಯುಕ್ತ ಮಂಜುನಾಥ್ ಅವರ ಕ್ರಮ ನಿಜಕ್ಕೂ ಅಭಿನಂದನೀಯ ಸಂಗತಿಯಾಗಿದೆ’ ಎಂದು ತಿಳಿಸಿದ್ದಾರೆ. ಪರಿಶೀಲನೆ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಟಿಪಿಎಂ ಅಭಿಲಾಷ್, ಸರ್ವೇಯರ್ ಸೇರಿದಂತೆ ಮೊಲಾದವರು ಉಪಸ್ಥಿತರಿದ್ದರು.
Shivamogga, October 13: A case involving the encroachment of land worth crores of rupees—belonging to the Shivamogga-Bhadravathi Urban Development Authority—for the construction of a layout has come to light in the Kuvempu Nagar locality of Shivamogga. Acting on complaints from local citizens, C.G. Madhusudan, Chairman of the Urban Development Authority, and Commissioner B.R. Manjunath visited Kuvempu Nagar on the evening of October 13 to inspect the site and examine the relevant documents. During the visit, local residents met the officials and voiced their grievances.

