ಶಿವಮೊಗ್ಗ (shivamogga), ಸೆಪ್ಟೆಂಬರ್ 26: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ತಿಳಿಸಿ ಕೆರೆಯ ಬಳಿ ಆಗಮಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಪತ್ತೆ ಮಾಡಿ ರಕ್ಷಿಸಿದ ಘಟನೆ ಸೆಪ್ಟೆಂಬರ್ 26 ರಂದು ನಡೆದಿದೆ.
ಏನೀದು ಘಟನೆ? : ಶಿವಮೊಗ್ಗದ ಬಡಾವಣೆಯೊಂದರ ನಿವಾಸಿಯಾದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ, ‘ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆನೆ. ಕ್ಷಮಿಸಿ…’ ಎಂದು ತನ್ನ ಕುಟುಂಬದವರಿಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ತಿಳಿಸಿದ್ದ.
ಗಾಬರಿಗೊಂಡ ಕುಟುಂಬದವರು ಈ ಸಂಗತಿಯನ್ನು, ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರಿಗೆ ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಂತೋಷ್ ಕುಮಾರ್ ಅವರು, ತಮ್ಮ ಸಿಬ್ಬಂದಿಗಳ ಮೂಲಕ ವಿದ್ಯಾರ್ಥಿಯ ಪತ್ತೆಗೆ ಕ್ರಮಕೈಗೊಂಡಿದ್ದರು.
ಈ ನಡುವೆ ವಿನೋಬನಗರ ಪೊಲೀಸ್ ಠಾಣೆ ಸಿಬ್ಬಂದಿ ಯೋಗೇಶ್ ಹಾಗೂ ಎಸ್ಪಿ ಕಚೇರಿ ಸಿಬ್ಬಂದಿ ಗುರುರಾಜ್ ರವರು ವಿದ್ಯಾರ್ಥಿಯು ಶಿವಮೊಗ್ಗದ ಹೊರವಲಯ ಸೋಮಿನಕೊಪ್ಪದ ಕೆರೆ ಬಳಿಯಿರುವುದನ್ನು ಪತ್ತೆ ಹಚ್ಚಿದ್ದರು.
ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕೆರೆ ಬಳಿಯಿದ್ದ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ. ನಂತರ ಅವರ ಕುಟುಂಬದವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಿಸಿದ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಯೋಗೇಶ್ ಮತ್ತು ಗುರುರಾಜ್ ಅವರಿಗೆ ಎಸ್ಪಿ ನಿಖಿಲ್ ಬಿ ಅವರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Shivamogga : Engineering student near the lake – Vinobanagara police make a cinematic entry – What is the case?

