shimoga dasara news | ಶಿವಮೊಗ್ಗ ದಸರಾ ಜಂಬೂ ಸವಾರಿಗೆ ವಿಘ್ನ : ‘ಸೋಮಣ್ಣ’ ಆನೆಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ನಾಗರಿಕರು!

Hitch in Shivamogga Dasara 'Jambu Savari': Citizens Terrified by Elephant 'Somanna's' Rampage! | Shivamogga, October 21: The 'Jambu Savari' (elephant procession)—a key attraction of the Dasara festival's Vijayadashami celebrations in Shivamogga city—took a dangerous turn. On the evening of October 21, the elephant 'Somanna', which was carrying a silver *ambari* (howdah), went on a rampage, running wildly in various directions and leaving citizens terrified!
ವರದಿ : ಬಿ ರೇಣುಕೇಶ್

ಶಿವಮೊಗ್ಗ (shivamogga), ಅಕ್ಟೋಬರ್ 21: ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ವಿಜಯದಶಮಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿಯೂ, ಅನಾಹುತಕಾರಿ ಘಟನೆಗೆ ಎಡೆ ಮಾಡಿಕೊಟ್ಟಿದೆ. ಬೆಳ್ಳಿಯ ಅಂಬಾರಿ ಹೊತ್ತ ‘ಸೋಮಣ್ಣ’ ಆನೆಯು ರೌದ್ರಾವತಾರ ತಾಳಿ, ಎಲ್ಲೆಂದರಲ್ಲಿ ಓಡಿ ಹೋದ ಪರಿಣಾಮದಿಂದ ನಾಗರಿಕರು ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಅಕ್ಟೋಬರ್ 21 ರ ಸಂಜೆ ನಡೆಯಿತು!

ಏನಾಯ್ತು? : ಶಿವಪ್ಪನಾಯಕ ಅರಮನೆ ಆವರಣದಲ್ಲಿ ಮಧ್ಯಾಹ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ವಿಗ್ರಹವಿದ್ದ ಬೆಳ್ಳಿಯ ಅಂಬಾರಿಯನ್ನು ‘ಸೋಮಣ್ಣ’ ಆನೆ ಹೊತ್ತಿಕೊಂಡಿತ್ತು.

ಈತನಿಗೆ ಎಡಬಲದಲ್ಲಿ ಸಾಗರ್ ಹಾಗೂ ಬಹದ್ದೂರ್ ಆನೆಗಳು ಸಾಥ್ ನೀಡಿದ್ದವು. ಜಂಬೂ ಸವಾರಿಯೂ ಸಾಂಗಾವಾಗಿ ಸಾಗಿತ್ತು. ಎಸ್’ಪಿಎಂ ರಸ್ತೆಯ ಜೈನ್ ಭವನದ ಬಳಿ ಆಗಮಿಸುತ್ತಿದ್ದಂತೆ ಏಕಾಏಕಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಮದವೇರಿದ ರೀತಿಯಲ್ಲಿ ವರ್ತಿಸಲಾರಂಭಿಸಿದ್ದಾನೆ.

ತದನಂತರ ತಾನು ಆಗಮಿಸಿದ ದಾರಿಯಲ್ಲಿ ಹಿಂದಿರುಗಿ ಓಡಲಾರಂಭಿಸಿದ್ದಾನೆ. ಈತನೊಂದಿಗಿದ್ದ ಬಹದ್ದೂರ್ ಆನೆ ಕೂಡ ಓಡಲಾರಂಭಿಸಿದೆ. ಆದರೆ ಸಾಗರ್ ಆನೆ ಮಾತ್ರ ಶಾಂತವಾಗಿ ನಿಂತಲ್ಲಿಯೇ ನಿಂತಿದ್ದ. ಎರಡು ಆನೆಗಳು ದಿಕ್ಕಾಪಾಲಾಗಿ ಓಡಿಲಾರಂಭಿಸಿದ್ದು, ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಜೊತೆಗೆ ರಸ್ತೆ ಬದಿಯಲ್ಲಿದ್ದವರು ಎದ್ದುಬಿದ್ದು ಓಡಿ ಹೋಗಿದ್ದಾರೆ.

ಶಿವಪ್ಪನಾಯಕ ಅರಮನೆ ಮುಂಭಾಗದ ರಸ್ತೆಯಲ್ಲಿ ಓಡಿ ಬಂದ ಸೋಮಣ್ಣ ಆನೆ ಮೇಲಿದ್ದ ಅಂಬಾರಿ ಕೆಳಕ್ಕೆ ವಾಲಿದೆ. ಆನೆಯ ಕಾಲಿನ ಬಳಿ ಬಂದಿದೆ. ಇದು ರಸ್ತೆ ಬದಿ ನಿಲ್ಲಿಸಿದ್ದ ಕಾರು, ಬೈಕ್ ಗಳಿಗೆ ತಗುಲಿ ಹಾನಿಯಾಗಿದೆ. ಚಿಕ್ಕ ಓಣಿಯೊಂದಕ್ಕೆ ಸೋಮಣ್ಣ ಆನೆ ನುಗ್ಗಿದೆ. ಈ ವೇಳೆ ಮಾವುತ ಮನೆ ಮೇಲ್ಭಾಗ ಹಾರಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮನೆಗೂ ಹಾನಿಯಾಗಿದೆ.

ಈ ನಡುವೆ ಸೋಮಣ್ಣ ಹಾಗೂ ಬಹದ್ದೂರ್ ಆನೆಗಳು ಅರಮನೆ ಎದುರಿನ ರಸ್ತೆಯಲ್ಲಿ ಜಗಳ ಮಾಡಿಕೊಳ್ಳಲಾರಂಭಿಸಿದ್ದವು. ಆನೆಗಳ ನಿಯಂತ್ರಣಕ್ಕೆ ಜೊತೆಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು, ಮಾವುತರು, ಕಾವಾಡಿಗಳು ಭಾರೀ ಹರಸಾಹಸ ನಡೆಸಿದರು.

ಆನೆಗಳು ಸಮಾಧಾನಗೊಂಡ ನಂತರ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಪಕ್ಕದ ಶೆಡ್ ಗೆ ಎರಡು ಆನೆಗಳನ್ನು ಕರೆದೊಯ್ದಿದ್ದಾರೆ. ಅಂಬಾರಿಯನ್ನು ಇಳಿಸಿದ್ದಾರೆ. ಜೊತೆಗೆ ಸಕ್ರೆಬೈಲು ಬಿಡಾರದ ವೈದ್ಯರನ್ನು ಕರೆಯಿಸಿ ಆನೆಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಎರಡು ಆನೆಗಳು ಶಾಂತಗೊಂಡ ನಂತರ, ಅವುಗಳನ್ನು ಸುರಕ್ಷಿತವಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಕೊಂಡೊಯ್ದಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಿಲ್ಲಾಧಿಕಾರಿ  ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಉಪಸ್ಥಿತರಿದ್ದು ಪರಿಸ್ಥಿತಿಯ ಅವಲೋಕನ ನಡೆಸಿದರು.

ದಿಡೀರ್ ಬದಲಾವಣೆ ಮಾಡಿದ್ದೇಕೆ?

***  ಕಳೆದ ವರ್ಷ ಅಂಬಾರಿ ಹೊತ್ತು ಸಾಗಿದ್ದ ಸಾಗರ್ ಆನೆಯನ್ನು ಈ ಬಾರಿಯೂ ಅಂಬಾರಿ ಹೊರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಕಳೆದ ಕೆಲ ದಿನಗಳ ಹಿಂದೆಯೇ ಸಕ್ರೆಬೈಲು ಬಿಡಾರದಿಂದ ಮೂರು ಆನೆಗಳನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು. ಪ್ರತಿನಿತ್ಯ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಆನೆಗಳನ್ನು ಕರೆದೊಯ್ದು ತಾಲೀಮು ನಡೆಸಲಾಗುತ್ತಿತ್ತು. ಆದರೆ ಮೆರವಣಿಗೆ ಮುನ್ನಾ ದಿನ ಸಾಗರ್ ಬದಲಿಗೆ, ಸೋಮಣ್ಣ ಆನೆಗೆ ಅಂಬಾರಿ ಹೊರಿಸುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಿತ್ತು. ಅರಣ್ಯ ಇಲಾಖೆಯ ದಿಡೀರ್ ನಿರ್ಧಾರವು ಸಾಕಷ್ಟು ಚರ್ಚೆಗೆಡೆ ಮಾಡಿಕೊಟ್ಟಿತ್ತು. ಇದೀಗ ಅರಣ್ಯ ಇಲಾಖೆ ನಿರ್ಧಾರ ಸರಿಯಲ್ಲವೆಂಬುವುದು ಸಾಬೀತಾಗಿದೆ.

 

ತಪ್ಪಿದ ಭಾರೀ ದೊಡ್ಡ ಅನಾಹುತ..!

*** ಸೋಮಣ್ಣ ಆನೆಯೇನಾದರೂ ಗಾಂಧಿ ಬಜಾರ್ ಅಥವಾ ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕ್ ಬಳಿಯೇನಾದರೂ ರೌದ್ರಾವತಾರ ತಾಳಿ ಓಡಿದ್ದರೇ ಭಾರೀ ದೊಡ್ಡ ಪ್ರಮಾಣದ ಅನಾಹುತವೇ ಸಂಭವಿಸುತ್ತಿತ್ತು ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಾರೆ. ಮೆರವಣಿಗೆ ಆರಂಭಗೊಂಡ ಸ್ಥಳದಿಂದ ಕೆಲ ಮೀಟರ್ ದೂರದವರೆಗೆ ಕ್ರಮಿಸಿ ನಂತರ ಅದೇ ಸ್ಥಳದತ್ತ ಎರಡು ಆನೆಗಳು ಓಡಿ ಬಂದಿವೆ. ದೇವರ ದಯೆಯಿಂದ ದೊಡ್ಡ ಅನಾಹುತವು ಕೂದಲೆಳೆ ಅಂತರದಲ್ಲಿ ತಪ್ಪಿದೆ. ವಾಹನಗಳು ಹೊರತುಪಡಿಸಿದರೆ, ನಾಗರಿಕರಿಗೆ ಕಿಂಚಿತ್ತೂ ತೊಂದರೆಯೂ ಆಗಿಲ್ಲ.

 

ಜನಜಂಗುಳಿ… ನಿರಾಸೆ…!

*** ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಭಾರೀ ದೊಡ್ಡ ಸಂಖ್ಯೆಯ ನಾಗರಿಕರು ನೆರೆದಿದ್ದರು. ಆದರೆ ಜಂಬೂ ಸವಾರಿಗೆ ವಿಘ್ನ ಎದುರಾಗಿದ್ದು ನಾಗರಿಕರಲ್ಲಿ ನಿರಾಸೆಯ ಭಾವ ಉಂಟು ಮಾಡಿತ್ತು. ಮತ್ತೊಂದೆಡೆ, ಆನೆಗಳು ಬೀಡುಬಿಟ್ಟಿದ್ದ ಶಿವಪ್ಪನಾಯಕ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಸಂಖ್ಯೆಯ ಜನಜಂಗುಳಿ ನೆರೆದಿತ್ತು. ಆನೆಗಳನ್ನು ಕರೆದೊಯ್ಯುವಾಗ ಜನಜಂಗುಳಿ ನಿಯಂತ್ರಣಕ್ಕೆ ಪೊಲೀಸರು ಭಾರೀ ಹರಸಾಹಸ ನಡೆಸುವಂತಾಗಿತ್ತು. ಬೆಳ್ಳಿಯ ಅಂಬಾರಿ ಹಾಗೂ ಅದರೊಳಗಿದ್ದ ಚಾಮುಂಡೇಶ್ವರಿ ವಿಗ್ರಹ ಹಾನಿಗೀಡಾಗಿದ್ದು ನಾಗರಿಕರಲ್ಲಿ ವಿಷಾದದ ಭಾವ ಉಂಟು ಮಾಡಿತ್ತು. ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗುವಂತಾಗಿತ್ತು.

 

Hitch in Shivamogga Dasara ‘Jambu Savari’: Citizens Terrified by Elephant ‘Somanna’s’ Rampage! | Shivamogga, October 21: The ‘Jambu Savari’ (elephant procession)—a key attraction of the Dasara festival’s Vijayadashami celebrations in Shivamogga city—took a dangerous turn. On the evening of October 21, the elephant ‘Somanna’, which was carrying a silver *ambari* (howdah), went on a rampage, running wildly in various directions and leaving citizens terrified!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *