ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 22: ದಸರಾ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆ ವೇಳೆ ಬೆಳ್ಳಿಯ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ಬೆದರಿ ಹಿಂದಕ್ಕೆ ಓಡಿ ಹೋದ ಪ್ರಕರಣವು ದೇಶಾದ್ಯಂತ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ತುಣುಕು, ಪೋಟೋಗಳು ವೈರಲ್ ಆಗಿವೆ!
‘ಸೋಮಣ್ಣ’ ಆನೆಯ ಬಗ್ಗೆ ನಾಗರಿಕರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಅನನುಭವಿ ಆನೆಯ ಮೇಲೆ ಅಂಬಾರಿ ಹೊರಿಸಿದ ಅರಣ್ಯ ಇಲಾಖೆ ನಿರ್ಧಾರಕ್ಕೆ ನೆಟ್ಟಿಗರು ಕಟು ಟೀಕೆ ಮಾಡುತ್ತಿದ್ದಾರೆ. ಜೊತೆಗೆ ರಸ್ತೆಗಳಲ್ಲಿ ಸೋಮಣ್ಣ ಹಾಗೂ ಬಹದ್ದೂರ್ ಆನೆಗಳು ದಿಕ್ಕಾಪಾಲಾಗಿ ಓಡಿದರೂ, ನಾಗರಿಕರಿಗೆ ಕಿಂಚಿತ್ತೂ ಅಪಾಯ ಉಂಟು ಮಾಡದಿದ್ದಕ್ಕೆ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ.
ಕ್ರಮ ಸಾಧ್ಯತೆ : ಸದರಿ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಯು ಘಟನೆಯ ಸಮಗ್ರ ವರದಿ ನೀಡುವಂತೆ, ಶಿವಮೊಗ್ಗದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವ ಸಾಧ್ಯತೆಯೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಡವಟ್ಟು : ಕಳೆದ ವರ್ಷ ಅಂಬಾರಿ ಹೊತ್ತಿದ್ದ ‘ಸಾಗರ್’ ಆನೆಯ ಮೂಲಕವೇ, ಈ ಬಾರಿಯೂ ಕೂಡ ಅಂಬಾರಿ ಹೊರಿಸಲು ನಿರ್ಧರಿಸಲಾಗಿತ್ತು. ಅದರಂತೆ ಸಾಗರ್, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳನ್ನು ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗಕ್ಕೆ ಕರೆತಂದು ಐದು ದಿನಗಳ ಕಾಲ ತಾಲೀಮು ಮಾಡಿಸಲಾಗಿತ್ತು.
ಆದರೆ ಸಾಗರ್ ಆನೆಯ ಬದಲಾಗಿ, ವಿಜಯದಶಮಿ ಮುನ್ನಾ ದಿನ ಸೋಮಣ್ಣ ಆನೆಯ ಮೇಲೆ ಅಂಬಾರಿ ಹೊರಿಸುವ ದಿಡೀರ್ ನಿರ್ಧಾರ ಕೈಗೊಳ್ಳಲಾಗಿತ್ತು. ಇದೆ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆಯು, ಮೆರವಣಿಗೆಯ ಗೌಜು – ಗದ್ದಲಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬಹುದು, ಆತನ ಮಾನಸಿಕ ಕ್ಷಮತೆ ಅಂದಾಜಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಹಾಗೆಯೇ ಗಂಡಾನೆಗಳ ಗುಂಪಿನಲ್ಲಿ ಹೆಣ್ಣಾನೆ ಬಳಕೆ ಮಾಡಬೇಕಾಗಿತ್ತು. ಕನಿಷ್ಠ 10 ರಿಂದ 15 ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಆನೆಗಳಿಗೆ ತಾಲೀಮು ನಡೆಸಬೇಕಾಗಿತ್ತು. ಇಂತಹ ಕನಿಷ್ಠ ಮುಂದಾಲೋಚನೆಯ ಕ್ರಮಗಳನ್ನು ಕೂಡ ಅರಣ್ಯ ಇಲಾಖೆ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಿರ್ಬಧ ಬೀಳಲಿದೆಯೇ? : ಮೈಸೂರು ರೀತಿಯಲ್ಲಿ ರಾಜ್ಯದ ವಿವಿಧೆಡೆ, ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ಆಯೋಜಿಸಲಾಗುತ್ತದೆ. ಆನೆಗಳ ಮೇಲೆ ಚಾಮುಂಡೇಶ್ವರಿ ದೇವರ ವಿಗ್ರಹವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿಕೊಂಡು ಬರಲಾಗುತ್ತಿದೆ.
ಶಿವಮೊಗ್ಗದಲ್ಲಿ ನಡೆದ ಕಹಿ ಘಟನೆಯ ನಂತರ ಮೈಸೂರು ಹೊರತುಪಡಿಸಿ, ಇತರೆಡೆ ಜಂಬೂ ಸವಾರಿಗೆ ಕಡಿವಾಣ ಹಾಕಬೇಕು ಎಂಬ ಆಗ್ರಹವನ್ನು ಕೆಲ ವನ್ಯಜೀವಿ ಪ್ರಿಯರು ಆಗ್ರಹಿಸಲಾರಂಭಿಸಿದ್ದಾರೆ. ಒಂದು ವೇಳೆ ಜಂಬೂ ಸವಾರಿ ಆಯೋಜನೆಗೆ ಅವಕಾಶ ನೀಡಿದರೆ, ಮೈಸೂರು ಮಾದರಿಯಲ್ಲಿ ಆನೆಗಳನ್ನು ಮೆರವಣಿಗೆಗೆ ಸಿದ್ದಪಡಿಸುವ ಕಾರ್ಯ ನಡೆಸಬೇಕು ಎಂದು ಸಲಹೆ ನೀಡುತ್ತಾರೆ.
ಒಟ್ಟಾರೆ ಶಿವಮೊಗ್ಗದ ಜಂಬೂ ಸವಾರಿ ವೇಳೆ ನಡೆದ ಕಹಿ ಘಟನೆಯೂ ನಾಗರಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆಡೆ ಮಾಡಿಕೊಟ್ಟಿದೆ. ಜೊತೆಗೆ ಆಡಳಿತಕ್ಕೂ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದರೆ ತಪ್ಪಾಗಲಾರದು.
ವಿಗ್ರಹದ ಮೇಲಿದ್ದ ಆಭರಣಗಳು ಸುರಕ್ಷಿತ!
*** ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ ಪರಿಣಾಮದಿಂದ, ಬೆಳ್ಳಿಯ ಅಂಬಾರಿ ಹಾಗೂ ಅದರಲ್ಲಿದ್ದ ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಹಾನಿಯಾಗಿದೆ. ಉಳಿದಂತೆ ವಿಗ್ರಹಕ್ಕೆ ಹಾಕಲಾಗಿದ್ದ ಚಿನ್ನಾಭರಣಗಳು ಸುರಕ್ಷಿತವಾಗಿವೆ. ಅವುಗಳನ್ನು ಪಾಲಿಕೆ ಆಡಳಿತ ಸಂರಕ್ಷಿಸಿದೆ. ಯಾವುದೇ ಆಭರಣಗಳು ಕಾಣೆಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಬಿಡಾರಕ್ಕೆ ಗಜಪಡೆಗಳ ಸ್ಥಳಾಂತರ
*** ಅಂಬಾರಿ ಪ್ರಕರಣದ ನಂತರ ಮೂರು ಆನೆಗಳನ್ನು ಅಕ್ಟೋಬರ್ 21 ರ ರಾತ್ರಿಯೇ ಶಿವಮೊಗ್ಗ ನಗರದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಅರಣ್ಯ ಇಲಾಖೆ ಸ್ಥಳಾಂತರಗೊಳಿಸಿದೆ. ಸ್ಥಳಾಂತರದ ವೇಳೆ ಸೋಮಣ್ಣ ಆನೆ ಶಾಂತವಾಗಿತ್ತು. ನಾಗರಿಕರಿಗೆ ಆಗಾಗ್ಗೆ ಸೊಂಡಿಲಿನ ಮೂಲಕ ನಮಿಸುತ್ತಿದ್ದ ದೃಶ್ಯ ಕಂಡುಬಂದಿತು.
Shivamogga, October 22: The incident involving the elephant ‘Somanna’—which was carrying a silver howdah during the Dasara Vijayadashami ‘Jambu Savari’ (procession)—getting startled and running backwards has become a topic of discussion across the country. Videos and photographs of the incident have gone viral on social media!

