shimoga news | ವರ್ಷಗಳೇ ಉರುಳಿದರೂ ಹಂಚಿಕೆಯಾಗದ ನಿವೇಶನಗಳು : ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವಿಳಂಬ ನೀತಿಗೆ ಬೇಸತ್ತ ನಾಗರಿಕರು!

suda office
ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ನವೆಂಬರ್ 20: ‘ವರ್ಷಗಳೇ ಉರುಳಿದರೂ ಸಿಗದ ನಿವೇಶನ… ಅರ್ಜಿಯೊಂದಿಗೆ ಲಕ್ಷ ಲಕ್ಷ ರೂ. ಪಾವತಿಸಿ ಸಮರ್ಪಕ ಮಾಹಿತಿಯಿಲ್ಲದೆ, ಕಚೇರಿಗೆ ಅಲೆದಾಡುತ್ತಿರುವ ಬಡ – ಮಧ್ಯಮ ವರ್ಗದ ನಾಗರಿಕರು..!’

ಇದು, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ವು ಶಿವಮೊಗ್ಗ ನಗರದ ಊರುಗಡೂರಿನಲ್ಲಿ, ಹೊಸದಾಗಿ ಅಭಿವೃದ್ದಿಪಡಿಸುತ್ತಿರುವ ಬಡಾವಣೆಯಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ ನಾಗರಿಕರ ಪಡಿಪಾಟಲು!!

ವಿಳಂಬ : ಬರೋಬ್ಬರಿ ಸರಿಸುಮಾರು 15 ವರ್ಷಗಳ ನಂತರ ನಗರಾಭಿವೃದ್ದಿ ಪ್ರಾಧಿಕಾರ ಬಡಾವಣೆ ನಿರ್ಮಿಸಿದೆ. ಲೇಔಟ್ ನಿರ್ಮಾಣ ಪೂರ್ವದಲ್ಲಿ ಅರ್ಹ ನಾಗರಿಕರಿಂದ ಅರ್ಜಿ ಆಹ್ವಾನಿಸಿತ್ತು. ಹಲವು ವರ್ಷಗಳ ನಂತರ ಪ್ರಾಧಿಕಾರವು ನಿವೇಶನಕ್ಕೆ ಅರ್ಜಿ ಆಹ್ವಾನಿಸಿದ್ದರಿಂದ, ಸಾವಿರಾರು ಸಂಖ್ಯೆಯ ನಾಗರೀಕರು ಪ್ರಾಧಿಕಾರ ಸೂಚಿಸಿದ್ದ ಮುಂಗಡ ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸ್ವೀಕರಿಸಿ ಎರಡು ವರ್ಷವಾಗುತ್ತಿದೆ. ಆದರೆ ಇಲ್ಲಿಯವರೆಗೂ ಪ್ರಾಧಿಕಾರವು ಅರ್ಹ ನಾಗರೀಕರಿಗೆ ನಿವೇಶನ ಹಂಚಿಕೆಯ ಪ್ರಕ್ರಿಯೆ ಆರಂಭಿಸಿಲ್ಲ. ಅರ್ಜಿ ಸ್ವೀಕರಿಸುವ ವೇಳೆಯಿದ್ದ ಉತ್ಸಾಹ, ಹಂಚಿಕೆ ಪ್ರಕ್ರಿಯೆ ಆರಂಭದತ್ತ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಂಪೂರ್ಣ ದಿವ್ಯ ಮೌನಕ್ಕೆ ಶರಣಾಗಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ.

ಸಂಖ್ಯೆ ಎಷ್ಟು? : ಲಭ್ಯ ಮಾಹಿತಿ ಅನುಸಾರ ವಿವಿಧ ಅಳತೆಯ ಸುಮಾರು 914 ನಿವೇಶನಗಳಿಗೆ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. 3 ಸಾವಿರಕ್ಕೂ ಅಧಿಕ ಅರ್ಜಿಗಳು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿವೆ. ಸದರಿ ಅರ್ಜಿಗಳ ಪರಿಶೀಲನೆ, ಅರ್ಹ ಫಲಾನುಭವಿಗಳ ಆಯ್ಕೆ, ಆಕ್ಷೇಪಣೆ ಆಹ್ವಾನ ಪ್ರಕ್ರಿಯೆಗಳು ಇಲ್ಲಿಯವರೆಗೂ ಆರಂಭವಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ, ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸಾವಿರಾರು ನಾಗರೀಕರು ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಂಡಿದ್ದಾರೆ. ಅರ್ಹ ಫಲಾನುಭವಿಗಳ ಪಟ್ಟಿ ಯಾವಾಗ ಪ್ರಕಟವಾಗಲಿದೆ? ಎಂಬ ಸಮರ್ಪಕ ಮಾಹಿತಿ ಲಭ್ಯವಾಗದೆ ಗೊಂದಲಕ್ಕೊಳಗಾಗುವಂತಾಗಿದೆ.

‘ಸಾಲಸೋಲ ಮಾಡಿ ಲಕ್ಷಾಂತರ ರೂ. ಮುಂಗಡ ಪಾವತಿಸಿ, ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಒಂದೂವರೆ ವರ್ಷವಾಗುತ್ತ ಬಂದರೂ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಿಲ್ಲ. ಮತ್ತೊಂದೆಡೆ, ಮಾಡಿದ ಸಾಲಕ್ಕೆ ಪ್ರತಿ ತಿಂಗಳು ಸಾವಿರಾರು ರೂ. ಬಡ್ಡಿ ತೆತ್ತುವಂತಾಗಿದೆ. ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವೇ, ಪಾವತಿಸಿದ ಮುಂಗಡ ಹಣವಾದರೂ ನಾಗರೀಕರಿಗೆ ಹಿಂದಿರುಗಿಸಬೇಕು’ ಎಂದು ನಿವೇಶನಕ್ಕೆ ಅರ್ಜಿ ಸಲ್ಲಿಸಿದ ನಾಗರೀಕರು ಆಗ್ರಹಿಸಲಾರಂಭಿಸಿದ್ದಾರೆ.

ನೂತನ ಅಧ್ಯಕ್ಷ ಸಿ ಜಿ ಮಧುಸೂದನ್ ಗಮನಹರಿಸಲಿ
madhusudhan
madhusudhan

*** ನಗರಾಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿಯೇ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಆದರೆ  ಸಾಧ್ಯವಾಗಿರಲಿಲ್ಲ. ಈ ನಡುವೆ ಯುವ ಮುಖಂಡ ಸಿ ಜಿ ಮಧುಸೂದನ್ ಅವರು ಪ್ರಾಧಿಕಾರದ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಸದ್ದುಗದ್ದಲವಿಲ್ಲದೆ ಆಡಳಿತದಲ್ಲಿ ಹಲವು ಸುಧಾರಣೆ ತರಲಾರಂಭಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಊರುಗಡೂರು ಬಡಾವಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಿ ಜಿ ಮಧುಸೂದನ್ ಅವರು ಗಮನಹರಿಸಬೇಕಾಗಿದೆ.

Sites Remain Unallotted Despite the Passing of Years: Citizens Frustrated by the Delaying Tactics of the Shivamogga-Bhadravathi Urban Development Authority!

Shivamogga, November 20: “Sites that remain elusive even after years have rolled by… Citizens from the poor and middle classes, who paid lakhs of rupees along with their applications, are now left running from pillar to post—visiting the office repeatedly—without receiving any clear information!”

This is the plight of citizens who applied for sites in a new residential layout being developed by the Shivamogga-Bhadravathi Urban Development Authority (SUDA) at Urugadur in Shivamogga city!!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *