
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಬಿಜೆಪಿ ನಾಯಕ!
ಶಿವಮೊಗ್ಗ (shivamogga), ಜೂ. 17: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ (bjp) ಪಕ್ಷದ ಹಿರಿಯ ನಾಯಕರೋರ್ವರು ಹೃದಯಾಘಾತದಿಂದ (heart attack) ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ನಡೆದಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ (69) ಮೃತಪಟ್ಟ ಬಿಜೆಪಿ ನಾಯಕರೆಂದು ಗುರುತಿಸಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ (petrol diesel price hike) ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನೆಯಲ್ಲಿ ಎಂ.ಬಿ.ಭಾನುಪ್ರಕಾಶ್ ಅವರು ಕೂಡ ಭಾಗವಹಿಸಿದ್ದರು. ಶಿವಪ್ಪನಾಯಕ ವೃತ್ತದಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದಿದ್ದರು. ನಂತರ ಗೋಪಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ್ದರು.
ಪ್ರತಿಭಟನೆ ಪೂರ್ಣಗೊಂಡು ಹಿಂದಿರುಗುವ ವೇಳೆ ಎಂ.ಬಿ.ಭಾನುಪ್ರಕಾಶ್ (m b banuprakash) ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಬಿಜೆಪಿ ಪಕ್ಷದ ಹಿರಿಯ (bjp paty senior leader) ನಾಯಕ ಎಂ.ಬಿ.ಭಾನುಪ್ರಕಾಶ್ ಅವರ ಹಠಾತ್ ನಿಧನ, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ದಿಗ್ಭ್ರಮೆ ಮೂಡುವಂತೆ ಮಾಡಿದೆ. ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ನಿವಾಸಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.