ಜಮೀನು ವ್ಯಾಜ್ಯ : ಸಹೋದರನ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ!

ಶಿವಮೊಗ್ಗ, ಮಾ. 15: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಹೋದರನನ್ನೇ ಕೊಲೆ ಮಾಡಿದ್ದವನಿಗೆ ಜೀವಾವಧಿ ಹಾಗೂ ಇತರೆ ನಾಲ್ವರಿಗೆ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ, ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೊರಬ ತಾಲೂಕು ಕೊಲಗುಣಸೆ ಗ್ರಾಮದ ನಿವಾಸಿ ಮಂಜು ಯಾನೆ ಮಂಜುನಾಥ್ (25) ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನಿಗೆ 1.40 ಲಕ್ಷ ರೂ. ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಇದೇ ಪ್ರಕರಣದ ಇತರೆ ಆರೋಪಿಗಳಾದ ಶಿಕಾರಿಪುರ ತಾಲೂಕು ಕಣಸೋಗಿ ಗ್ರಾಮದ ನೀಲಮ್ಮ (45), ಮಂಜಪ್ಪ (51), ರವಿ (21) ಹಾಗೂ ಕೊಲಗುಣಸೆ ಗ್ರಾಮದ ರೂಪ (22) ಅವರಿಗೆ 1 ತಿಂಗಳ ಸಾದಾ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಮಾ. 13 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸೋಗಿ ಗ್ರಾಮದ ನಿವಾಸಿ ಬಂಗಾರಪ್ಪ (40) ಕೊಲೆಗೀಡಾದವರಾಗಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ 16-6-2019 ರಂದು ಸಹೋದರ ಮಂಜುನಾಥ್ ಹಾಗೂ ಇತರರು ಬಂಗಾರಪ್ಪರೊಂದಿಗೆ ಗಲಾಟೆ ಮಾಡಿದ್ದರು.

ಈ ವೇಳೆ ಮಂಜುನಾಥ್ ಕಬ್ಬಿಣದ ರಾಡ್ ನಿಂದ ಬಂಗಾರಪ್ಪ ತಲೆಗೆ ಹೊಡೆದು ಗಾಯಗೊಳಿಸಿದ್ದ. ತದನಂತರ ಬಂಗಾರಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 19-6-2019 ರಂದು ಮೃತಪಟ್ಟಿದ್ದರು.

ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ಬಸವರಾಜ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →