
shimoga | ಐ ಪೋನ್ ಡಿಸ್ ಪ್ಲೇ ಸರಿಪಡಿಸಿ ಕೊಡದ ಆರೋಪ : ಶಿವಮೊಗ್ಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹತ್ವದ ತೀರ್ಪು!
ಶಿವಮೊಗ್ಗ (shivamogga), ಫೆ. 22: ಐ ಪೋನ್ ಡಿಸ್ ಪ್ಲೇ ಸರಿಪಡಿಸಿ ಕೊಡದೆ ಸೇವಾ ನ್ಯೂನ್ಯತೆ ಎಸಗಿರುವುದು ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ, ದೂರುದಾರ ಗ್ರಾಹಕನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಎದುರುದಾರರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ಆಯೋಗದ ಅಧ್ಯಕ್ಷರಾದ ಟಿ ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ ಡಿ ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಫೆ. 14 ರಂದು ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ : ದೂರುದಾರ ಗ್ರಾಹಕರಾದ ಅರವಿಂದ ನಗರದ ನಿವಾಸಿಯಾದ ಪುನೀತ್ ಡಿ ಅವರು, ಶಿವಮೊಗ್ಗದ ಮೊಬೈಲ್ ಶಾಪ್ ವೊಂದರಿಂದ 28-9-2021 ರಂದು 79 ಸಾವಿರ ರೂ. ಪಾವತಿಸಿ ಐ ಪೋನ್ ಖರೀದಿಸಿದ್ದರು.
ಕಳೆದ ಎರಡ್ಮೂರು ತಿಂಗಳುಗಳ ಹಿಂದೆ ಮೊಬೈಲ್ ಪೋನ್ ಡಿಸ್ ಪ್ಲೇ ನಲ್ಲಿ ಬಣ್ಣದ ಗೆರೆಗಳು ಕಾಣಿಸಿಕೊಂಡಿದ್ದವು. ಈ ಸಂಬಂಧ ಮೊಬೈಲ್ ಪೋನ್ ಖರೀದಿಸಿದ್ದ ಅಂಗಡಿಗೆ ತೆರಳಿ ಮಾಹಿತಿ ನೀಡಿದ್ದರು. ಐಓಎಸ್ ಸಾಫ್ಟ್’ವೇರ್ ಅಪ್’ಡೇಟ್ ನಿಂದ ಮೊಬೈಲ್ ಪೋನ್ ಡಿಸ್ ಪ್ಲೇ ಹಾಳಾಗಿದೆ. ಸರ್ವಿಸ್ ಸೆಂಟರ್ ಸಂಪರ್ಕಿಸುವಂತೆ ತಿಳಿಸಿದ್ದರು.
ಸರ್ವಿಸ್ ಸೆಂಟರ್ ನವರು ಡಿಸ್ ಪ್ಲೇ ಹಾಳಾಗಿದ್ದು, ಸರಿಪಡಿಸಲು 26,492 ರೂ. ಪಾವತಿಸುವಂತೆ ಹೇಳಿದ್ದರು. ತಮ್ಮ ಕಂಪನಿಯ ಐಓಎಸ್ ಸಾಫ್ಟ್’ವೇರ್ ಅಪ್’ಡೇಟ್ ಮಾಡಿದಾಗ ಡಿಸ್ ಪ್ಲೇ ಹಾಳಾಗಿದೆ. ನಿಮ್ಮ ಖರ್ಚಿನಲ್ಲಿಯೇ ಸರಿಪಡಿಸಿಕೊಡುವಂತೆ ಗ್ರಾಹಕ ಮನವಿ ಮಾಡಿದ್ದರು.
ಆದರೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ, ಗ್ರಾಹಕನನ್ನು ಅಲೆದಾಡುವಂತೆ ಮಾಡಲಾಗಿತ್ತು. ಈ ಸಂಬಂಧ ಗ್ರಾಹಕನು ತಮ್ಮ ವಕೀಲರ ಮೂಲಕ ಶಿವಮೊಗ್ಗದಲ್ಲಿ ಮೊಬೈಲ್ ಖರೀದಿಸಿದ್ದ ಅಂಗಡಿ ಹಾಗೂ ಬೆಂಗಳೂರಿನಲ್ಲಿರುವ ಮೊಬೈಲ್ ಪೋನ್ ಗೆ ಸಂಬಂಧಿಸಿದ ಇತರೆ ಎರಡು ಕಡೆಯವರಿಗೆ ನೋಟೀಸ್ ಜಾರಿಗೊಳಿಸಿದ್ದರು. ಮೂರು ಕಡೆಯಿಂದಲೂ ಯಾವುದೇ ಪ್ರತ್ಯುತ್ತರ ಲಭ್ಯವಾಗಿರಲಿಲ್ಲ.
ಈ ಸಂಬಂಧ ಗ್ರಾಹಕನು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು. ದೂರುದಾರ ಗ್ರಾಹಕರ ಹಾಗೂ ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲೆಗಳು ಮತ್ತು ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ತೀರ್ಮಾನಿಸಿತ್ತು.
ಎದುರುದಾರರು ಗ್ರಾಹಕನಿಂದ ಯಾವುದೇ ಹಣವನ್ನು ಪಡೆಯದೆ 45 ದಿವಸದೊಳಗೆ ಐ ಪೋನ್ ಗೆ ಹೊಸ ಡಿಸ್ ಪ್ಲೇ ಅಳವಡಿಸಿಕೊಡಬೇಕು. ಮತ್ತು ಇತರೆ ಸೂಕ್ತ ರಿಪೇರಿ ಮಾಡಿ ಸರಿಪಡಿಸಿಕೊಡಬೇಕು. ತಪ್ಪಿದಲ್ಲಿ ಜಿ ಎಸ್ ಟಿ ಮೊತ್ತ ಕಡಿತಗೊಳಿಸಿ, ಮೊಬೈಲ್ ಮೊತ್ತ 79,900 ರೂ. ಪಾವತಿಸಬೇಕು.
ಮಾನಸಿಕ ಹಾನಿಗೆ 5000 ರೂ. ಹಾಗೂ ವ್ಯಾಜ್ಯದ ಖರ್ಚುವೆಚ್ಚದ ಬಾಬ್ತಾಗಿ 5000 ರೂ. ಗಳನ್ನು ಗ್ರಾಹಕನಿಗೆ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತಗಳನ್ನು ಪೂರ್ತಿ ಸಂದಾಯ ಮಾಡುವವರೆಗೆ ಶೇ. 10 ರಷ್ಟು ಬಡ್ಡಿ ಸಹಿತ ಪಾವತಿಸಬೇಕು ಎಂದು ಆಯೋಗ ತೀರ್ಪು ನೀಡಿದೆ.
Shimoga, February 22 : Shimoga District Consumer Disputes Redressal Commission has given a verdict to the opposing party to provide appropriate compensation to the complaining customer after it was proved during the inquiry that the iPhone display was not repaired.