
holehonnuru | ಹೊಳೆಹೊನ್ನೂರು : ಅಪಘಾತದ ಬೆನ್ನಲ್ಲೇ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ – ಫ್ಲೈ ಓವರ್ ನಿರ್ಮಾಣಕ್ಕೆ ಆಗ್ರಹ!
ವರದಿ : ಬಿ. ರೇಣುಕೇಶ್
ಭದ್ರಾವತಿ (bhadravati), ಫೆ. 2: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಹೊರವಲಯದಲ್ಲಿ, ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ಧಾರಿಗೆ ನೂತನವಾಗಿ ನಿರ್ಮಿಸುತ್ತಿರುವ ಬೈಪಾಸ್ ರಸ್ತೆಯಲ್ಲಿ, ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ!
ಕಳೆದ ಫೆಬ್ರವರಿ 24 ರಂದು ನೂತನ ಬೈಪಾಸ್ ರಸ್ತೆಯಲ್ಲಿ, ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಮರು ದಿನವೇ, ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಅಗಸನಹಳ್ಳಿ ಗ್ರಾಮದ ವ್ಯಕ್ತಿಯೋರ್ವರು ಮೃತಪಟ್ಟಿದ್ದರು.
ಇದು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಹೊಳೆಹೊನ್ನೂರು, ಎಮ್ಮೆಹಟ್ಟಿ, ಅಗಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆದ್ಧಾರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ಧಾರಿ ಇಲಾಖೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.
ಆಕ್ರೋಶಭರಿತ ಗ್ರಾಮಸ್ಥರು ನೂತನ ಬೈಪಾಸ್ ರಸ್ತೆಯ ಮೇಲೆ ಮಣ್ಣು ಸುರಿದು, ವಾಹನಗಳ ಸಂಚಾರ ನಿರ್ಬಂಧಿಸಿದ್ದರು. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ನೂತನ ಬೈಪಾಸ್ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನಿಟ್ಟು ವಾಹನ ಸಂಚಾರ ನಿರ್ಬಂಧಿಸಿದೆ. ಸೂಕ್ತ ಸಂಚಾರಿ ಸುರಕ್ಷಿತ ಕ್ರಮ ಕೈಗೊಂಡ ನಂತರವಷ್ಟೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಿದೆ.
ಗ್ರಾಮಸ್ಥರ ಆಗ್ರಹ : ಒಟ್ಟಾರೆ ನೂತನ ಬೈಪಾಸ್ ರಸ್ತೆ 2. 8 ಕಿ.ಮೀ. ಉದ್ದವಿದೆ. ಹೊಳೆಹೊನ್ನೂರು – ಭದ್ರಾವತಿ ರಸ್ತೆ ಹಾದು ಹೋಗುವ ಸ್ಥಳದಲ್ಲಿಯೇ ನೂತನ ಬೈಪಾಸ್ ರಸ್ತೆ ಹಾದು ಹೋಗುತ್ತದೆ. ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣದಿಂದ, ಸುಗಮ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವಂತೆ ಮೊದಲಿನಿಂದಲೂ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಆಗ್ರಹಿಸಿಕೊಂಡು ಬಂದಿದ್ದರು.
ಆದರೆ ಹೆದ್ದಾರಿ ಇಲಾಖೆಯು ನಿರ್ಲಕ್ಷ್ಯ ಮಾಡಿತ್ತು. ಫ್ಲೈ ಓವರ್ – ಅಂಡರ್ ಪಾಸ್ ನಿರ್ಮಾಣಕ್ಕೆ ಅಂದಾಜು ಪಟ್ಟಿಯಲ್ಲಿ ಅವಕಾಶ ಮಾಡಿಕೊಂಡಿಲ್ಲವೆಂದು ಹೇಳಿತ್ತು. ಸದ್ಯ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ ಪ್ರಾಯೋಗಿಕ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿತ್ತು.
ಗ್ರಾಮಸ್ಥರು ಫ್ಲೈ ಓವರ್ – ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಿದ್ದ ಸ್ಥಳದಲ್ಲಿಯೇ, ಸ್ಥಳೀಯರೋರ್ವರು ಅಪಘಾತದಲ್ಲಿ ಮೃತಪಟ್ಟಿದ್ದು, ಗ್ರಾಮಸ್ಥರ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಇದೀಗ ತಪ್ಪಿನ ಅರಿವಾದಂತಿರುವ ಹೆದ್ದಾರಿ ಇಲಾಖೆಯು, ನೂತನ ಬೈಪಾಸ್ ರಸ್ತೆಯಲ್ಲಿ ಪ್ರಾಯೋಗಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ.
ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿದ ನಂತರವಷ್ಟೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಆದರೆ ನಿರ್ಮಾಣ ಕಾರ್ಯ ಆರಂಭವಾಗುವುದು ಯಾವಾಗ? ಎಂಬುವುದು ಮಾತ್ರ ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
Bhadravati, Feb 2: On the outskirts of Holehonur town of Bhadravati taluk, on the newly constructed bypass road for Shimoga – Chitradurga national highway, traffic restrictions have been imposed! On February 24, vehicular traffic was practically allowed on the new bypass road. But the very next day, a man from Agasanahalli village was killed in a collision with a canter lorry.
This caused outrage among the surrounding villagers. The surrounding villagers including Holehonnur, Emmehatti, Agasanahalli had protested in highway. Peoples expressed their displeasure against the National highway Department.