shimoga | 'Chicken meat does not cause bird flu': Shimoga DC Gurudatta Hegade shimoga | ‘ಕೋಳಿ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ’ : ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ

shimoga | ‘ಕೋಳಿ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ’ : ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ

ಶಿವಮೊಗ್ಗ (shivamogga), ಮಾ. 6: ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಹಕ್ಕಿಜ್ವರ ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಹಾಗೂ ಜ್ವರ, ಉಸಿರಾಟದ ತೊಂದರೆ ಇತರೆ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಹೆಚ್5ಎನ್1 (ಹಕ್ಕಿಜ್ವರ) ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗ. ಇದು ಟರ್ಕಿ, ಗಿನಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಪ್ರಕರಣ ಕಂಡು ಬಂದಿಲ್ಲ. ಆದರೂ ಹಕ್ಕಿಜ್ವರ ಕುರಿತು ಮುಂಜಾಗೃತಿ ವಹಿಸಬೇಕು. ಸಾಮಾನ್ಯವಾಗಿ ಹಕ್ಕಿಜ್ವರ ಹೆಚ್1ಎನ್1 ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಬೇಧಿಯೂ ಆಗಬಹುದು. ಹಾಗೂ ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಈ ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗಳು ಅಥವಾ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು, ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು.

ಶಂಕಿತ ಹಕ್ಕಿಜ್ವರ ಪೀಡಿತ ಫಾರಂ ಗಳಿಗೆ ಭೇಟಿ ನೀಡಬಾರದು. ಒಂದು ವೇಳೆ ಸಂಪರ್ಕಕೆ ಬಂದಲ್ಲಿ ತಮ್ಮ ಕೈಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಟ್ಟೆ ಬದಲಾಯಿಸಬೇಕು. ಮುಂದಿನ ನಾಲ್ಕು ದಿನಗಳವರೆಗೆ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಒಂದು ವೇಳೆ ಜ್ವರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಜಿಲ್ಲೆಯಲ್ಲಿನ ಪಕ್ಷಿಧಾಮಗಳು ಮತ್ತು ಪೌಲ್ಟ್ರಿಗಳಲ್ಲಿ ನಿಯಮಿತವಾಗಿ ಪಕ್ಷಿಗಳ ಕಡೆ ನಿಗಾ ವಹಿಸಿ, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪಶುಪಾಲನಾ ಇಲಾಖೆಯ ವೈದ್ಯರು ಪಕ್ಷಿಧಾಮ ಮತ್ತು ಪೌಲ್ಟ್ರಿಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಐಇಸಿ ಮೂಲಕ ಜಾಗೃತಿ ಮೂಡಿಸಿ, ಪಿಡಿಓ ಗಳು ಕೋಳಿ ಜ್ವರದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಕೋಳಿ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ :

ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಮನುಷ್ಯರಲ್ಲಿ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸವನ್ನು ಚೆನ್ನಾಗಿ ಬೇಯಿಸದೇ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ ಎಂದು ಇದೇ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸ ಸಿದ್ದಪಡಿಸಿದ ನಂತರ ಕೈಗಳನ್ನು ನಂಜುನಾಶಕದಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು ಎಂದು ಅವರು ತಿಳಿಸಿದರು.

ಡಿಎಸ್‌ಓ ಡಾ.ನಾಗರಾಜ ನಾಯ್ಕ ಮಾತನಾಡಿ, ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಹಾಗೂ ಮೊಟ್ಟೆಯನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಕಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭದಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ.

ಹಕ್ಕಿಜ್ವರ ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಕಾಯಿಲೆ. ಆದ್ದರಿಂದ ಕಾಯಿಲೆ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿಯನ್ನು ನೀಡಬೇಕು. ಜಿಲ್ಲೆಯಲ್ಲಿ 332 ಪೌಲ್ಟ್ರಿ ಮತ್ತು 2 ಪಕ್ಷಿಧಾಮಗಳಿದ್ದು ಅಲ್ಲಿ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ಚಲನವಲನ ವೀಕ್ಷಿಸಲು ತಿಳಿಸಲಾಗಿದೆ.

65 ವರ್ಷ ದಾಟಿದ ಹಿರಿಯರು, ಗರ್ಭಿಣಿಯರು, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇತರೆ ಕೋಮಾರ್ಬಿಡಿಟಿ ಉಳ್ಳ ವ್ಯಕ್ತಿಗಳು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಜಿಲ್ಲೆಯಲ್ಲಿ ಕೋಳಿಜ್ವರಕ್ಕೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳು ಲಭ್ಯವಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೆಎಫ್‌ಡಿ ನಿಯಂತ್ರಣ ಚಟುವಟಿಕೆಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳಬೇಕು. ಡೇಪಾ ಆಯಿಲ್‌ನ್ನು ನಿಯಮಿತವಾಗಿ ಮಲೆನಾಡ ಭಾಗದ ಸಾರ್ವಜನಿಕರಿಗೆ ನೀಡಬೇಕು. ಜನರಲ್ಲಿ ಕೆಎಫ್‌ಡಿ ಕುರಿತು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಬೇಕು.

ಪ್ರಸ್ತುತ 6 ಸಕ್ರಿಯ ಪ್ರಕರಣಗಳಿದ್ದು, ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ನಾಯಿ ಕಡಿತ, ಹಾವು ಕಡಿತಕ್ಕೆ ಅಗತ್ಯವಾದ ಔಷಧಿಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹಾಗೂ ಬೀದಿ ನಾಯಿ ಹಾವಳಿ ನಿಯಂತ್ರಿಸಲು ಪಾಲಿಕೆಯೊಂದಿಗೆ ವಿಶೇಷ ಅಭಿಯಾನ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಡಿಹೆಚ್‌ಓ ಡಾ.ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಹೆಚ್‌ಓ ಗಳು ಹಾಜರಿದ್ದರು.

Shimoga, May 6: No case of bird flu has been reported in the district so far, but the public should take precautionary measures to avoid catching bird flu. And DC Gurudatta Hegde said that if fever, difficulty in breathing and other symptoms are found, they should be treated immediately.

Bird flu does not occur in humans through consumption of chicken meat or eggs. Meanwhile, District Collector Gurudatta Hegde said that there are chances of contracting the disease if the meat of the infected chicken is not cooked well and if they eat their raw eggs.

He spoke while presiding over the district level coordination committee meeting to prevent H5N1 (bird flu) and other infectious diseases organized at DC office in Shimoga city on Thursday.

shimoga | Shimoga: After the news report, the deputy commissioner of the corporation rushed to the protest site! shimoga | ಶಿವಮೊಗ್ಗ : ವರದಿ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಉಪ ಆಯುಕ್ತರು! Previous post shimoga | ಶಿವಮೊಗ್ಗ : ವರದಿ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಉಪ ಆಯುಕ್ತರು!
Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! Next post shimoga | ಶಿವಮೊಗ್ಗ ನಗರದ ಈ ಏರಿಯಾಗಳಲ್ಲಿ ಮಾ. 8 ರಂದು ಮಧ್ಯಾಹ್ನದವರೆಗೆ ವಿದ್ಯುತ್ ಇರಲ್ಲ!