
shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ವಸತಿ ಬಡಾವಣೆಗಳ ಸೇರ್ಪಡೆಗೆ ಹೆಚ್ಚಿದ ಒತ್ತಡ!
ವರದಿ : ಬಿ ರೇಣುಕೇಶ್
ಶಿವಮೊಗ್ಗ (shivamogga), ಜೂ. 16: ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ನಡೆಯುತ್ತಿದೆ. ಆದರೆ ನಗರಕ್ಕೆ ಹೊಂದಿಕೊಂಡಂತಿರುವ ಹಲವು ಜನವಸತಿ ಬಡಾವಣೆಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದ ಆಕ್ಷೇಪಕ್ಕೆ ಕಾರಣವಾಗಿದೆ!
ಈ ಹಿಂದೆ ಮಹಾನಗರ ಪಾಲಿಕೆ ಆಡಳಿತ ನಡೆಸಿದ ಸಮೀಕ್ಷೆಯ ವೇಳೆ, 9 ಗ್ರಾಮ ಪಂಚಾಯ್ತಿಯ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುವ ವರದಿ ಸಿದ್ದಪಡಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ.
ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ನಿರ್ಧರಿಸಿರುವ ಪ್ರದೇಶಗಳ ಕುರಿತಂತೆ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು 15 ದಿವಸದೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಈಗಾಗಲೇ ಹಲವು ಗ್ರಾಮ ಪಂಚಾಯ್ತಿ ಆಡಳಿತಗಳು ವಿಶೇಷ ಸಭೆ ಆಯೋಜಿಸಿ, ಜನಪ್ರತಿನಿಧಿಗಳು ಹಾಗೂ ನಾಗರೀಕರ ಅಭಿಪ್ರಾಯ ಸಂಗ್ರಹಿಸಿ, ಆಡಳಿತಕ್ಕೆ ನಿರ್ಣಯ ರವಾನಿಸುವ ಕಾರ್ಯ ನಡೆಸಿವೆ.
ಹೆಚ್ಚಿದ ಬೇಡಿಕೆ : ಜನಸಂಖ್ಯೆ ಕೊರತೆ, ಕೃಷಿ ಭೂಮಿ ಹೆಚ್ಚಳ ಮತ್ತೀತರ ಕಾರಣಗಳ ಕಾರಣಗಳ ಹಿನ್ನೆಲೆಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ.
ಇದರಿಂದ ಸದರಿ ಗ್ರಾಮಗಳ ಅಡಿಯಲ್ಲಿ ಸರಿಸುಮಾರು 10 ರಿಂದ 15 ವರ್ಷಗಳ ಹಿಂದೆ ಅಭಿವೃದ್ದಿ ಹೊಂದಿರುವ, ಜನವಸತಿ ಬಡಾವಣೆಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಗ್ರಾಪಂ ಆಡಳಿತಗಳಿಂದ ಪರಿಣಾಮಕಾರಿಯಾಗಿ ಬಡಾವಣೆಗಳ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ.
ಈ ಕಾರಣದಿಂದ ಜನವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸೂಕ್ತ ಗಮನಹರಿಸಬೇಕು. ಇಡೀ ಗ್ರಾಮ ಸೇರ್ಪಡೆ ಮಾಡಿಕೊಳ್ಳುವ ಬದಲಾಗಿ, ಸದರಿ ಗ್ರಾಮದಲ್ಲಿ ಅಭಿವೃದ್ದಿ ಹೊಂದಿರುವ ಜನವಸತಿ ಬಡಾವಣೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಬೇಕಾಗಿದೆ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.
ಈಗಾಗಲೇ ಹಲವು ಜನವಸತಿ ಬಡಾವಣೆ ನಿವಾಸಿಗಳು, ತಮ್ಮ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ನಿರ್ಣಯ ಅಂಗೀಕರಿಸುವಂತೆ ಗ್ರಾಪಂಗಳಿಗೆ, ಜಿಲ್ಲಾಡಳಿತಕ್ಕೆ, ಗ್ರಾಮಾಂತರ ಶಾಸಕರಿಗೆ ಮನವಿ ಅರ್ಪಿಸಿದ್ದಾರೆ. ಇದನ್ನು ಆಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.
ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಮನಹರಿಸಲಿ…
*** ನಿಯಮಾನುಸಾರ ಗ್ರಾಮ ಪಂಚಾಯ್ತಿ ಅಧೀನದ ಸಂಪೂರ್ಣ ಹಳ್ಳಿಯನ್ನು ಮಾತ್ರ ಪಾಲಿಕೆ ವ್ಯಾಪ್ತಿಗೆ ಹಸ್ತಾಂತರಿಸಬಹುದಾಗಿದೆ. ಇದು ಸಮಸ್ಯೆಯ ಮೂಲ ಕಾರಣವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯ್ತಿಯಾದ ಅಬ್ಬಲಗೆರೆ ಗ್ರಾಪಂ ಅಧೀನದ ಬಸವನಗಂಗೂರು ಗ್ರಾಮವು, ಸದರಿ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದೆ. ನಗರಕ್ಕೆ ಹೊಂದಿಕೊಂಡಂತೆ ಗ್ರಾಮವಿದೆ. ಸದರಿ ಗ್ರಾಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ವಸತಿ ಬಡಾವಣೆಗಳು ಅಭಿವೃದ್ದಿಗೊಂಡಿವೆ. ಪ್ರಸ್ತುತ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ಸಿದ್ದಪಡಿಸಿರುವ ಪಟ್ಟಿಯಲ್ಲಿ ಬಸವನಗಂಗೂರು ಗ್ರಾಮವಿಲ್ಲ.
ಇದರಿಂದ ಸದರಿ ಗ್ರಾಮದ ಅಧೀನದಲ್ಲಿರುವ ಕೆ ಹೆಚ್ ಬಿ ಪ್ರೆಸ್ ಕಾಲೋನಿ ಸೇರಿದಂತೆ ಇತರೆ ವಸತಿ ಬಡಾವಣೆಗಳು ಕೂಡ ಪಾಲಿಕೆ ವ್ಯಾಪ್ತಿ ಸೇರ್ಪಡೆಯಿಂದ ವಂಚಿತವಾಗುವಂತಾಗಿದೆ. ಈಗಾಗಲೇ ಬಸವನಗಂಗೂರು ಗ್ರಾಮದ ಕೆಲ ವಸತಿ ಬಡಾವಣೆಗಳ ನಿವಾಸಿಗಳು, ತಮ್ಮ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ನಿರ್ಣಯ ಅಂಗೀಕರಿಸುವಂತೆ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಕೂಡ ಇತ್ತ ಗಮನಹರಿಸಬೇಕಾಗಿದೆ. ಇಡೀ ಗ್ರಾಮ ಸೇರ್ಪಡೆಗೆ ಅವಕಾಶವಿಲ್ಲದಿದ್ದರೆ ಅಭಿವೃದ್ದಿ ಹೊಂದಿದ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೂಡ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ನಿರ್ಣಯ ಅಂಗೀಕರಿಸಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸುತ್ತಾರೆ.
ಅತಂತ್ರ ಸ್ಥಿತಿಯಲ್ಲಿ ಬಡಾವಣೆಗಳು!
*** ಪ್ರಸ್ತುತ ಪ್ರತಿಯೊಂದು ಬಡಾವಣೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ. ರಸ್ತೆ, ಒಳಚರಂಡಿ, ಬೀದಿ ದೀಪ, ಉದ್ಯಾನವನ ಸೇರಿದಂತೆ ಹಲವು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂ ಅಧೀನದ ಹಲವು ಬಡಾವಣೆಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ನಾಗರೀಕರು ಅಲೆದಾಡುವಂತಾಗಿದೆ. ಮತ್ತೊಂದೆಡೆ, ಗ್ರಾಪಂಗಳಿಗೂ ಬಡಾವಣೆಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಂಪನ್ಮೂಲಗಳ ಕೊರತೆ ಎದುರಾಗುತ್ತಿದೆ. ಈ ಕಾರಣದಿಂದ ಅಭಿವೃದ್ದಿ ಹೊಂದಿದ ಬಡಾವಣೆಗಳನ್ನು ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಪಾಲಿಕೆಗೆ ಯಾವುದೇ ಹೊರೆಯಾಗುವುದಿಲ್ಲ. ಆದಾಯ ಹೆಚ್ಚಾಗುತ್ತದೆ. ಜೊತೆಗೆ ಬಡಾವಣೆಗಳ ನಾಗರೀಕರಿಗೆ ಸಮರ್ಪಕವಾಗಿ ಮೂಲಸೌಕರ್ಯಗಳು ಲಭಿಸುತ್ತವೆ ಎಂಬುವುದು ಸ್ಥಳೀಯ ನಾಗರೀಕರ ಅಭಿಪ್ರಾಯವಾಗಿದೆ.
ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ!
*** ಸುಮಾರು 30 ವರ್ಷಗಳ ನಂತರ ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ವಹಿಸಬೇಕಾಗಿತ್ತು. ಸಾರ್ವಜನಿಕರ ಅಭಿಪ್ರಾಯ ಆಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ – ಸೂಚನೆ ನೀಡಬೇಕಾಗಿತ್ತು. ಆದರೆ ಸದರಿ ವಿಷಯದ ಬಗ್ಗೆ ಸರ್ವ ಪಕ್ಷಗಳ ಜನ ಸೇವಕರು ನಿರ್ಲಕ್ಷ್ಯ ಧೋರಣೆ ತಳೆದಂತೆ ಗೋಚರವಾಗುತ್ತಿದೆ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ.
ಅರಣ್ಯ ವ್ಯಾಪ್ತಿಯ ಪ್ರದೇಶಗಳು..!
*** ಪ್ರಸ್ತುತ ಪಾಲಿಕೆ ಸೇರ್ಪಡೆಗೆ ಸಿದ್ದಪಡಿಸಿರುವ ವರದಿಯಲ್ಲಿ ಕೆಲ ಹಳ್ಳಿಗಳು ಅರಣ್ಯ, ಅಭಯಾರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿವೆ. ಅರಣ್ಯ ಪ್ರದೇಶವೂ ಕೂಡ ಇದೆ. ಆದರೆ ಮತ್ತೊಂದೆಡೆ, ಜನವಸತಿ ಬಡಾವಣೆಗಳನ್ನು ವರದಿಯಿಂದ ಕೈಬಿಡಲಾಗಿದೆ. ಈ ಕಾರಣದಿಂದ ಜಿಲ್ಲಾಡಳಿತ ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂಬುವುದು ಬಡಾವಣೆಗಳ ನಾಗರೀಕರ ಆಗ್ರಹವಾಗಿದೆ.
Shivamogga, Jun. 16: After almost 30 years, the Shivamogga municipal area is being revised. But the fact that not considering including many residential areas that are adjacent to the city under the municipal area has led to objections from the public sector! Due to population shortage, increase in agricultural land, and other reasons, some villages that are close to the city are not being included in the municipal jurisdiction.
This is affecting the residential areas under the said villages, which were developed approximately 10 to 15 years ago. The Gram Panchayat administrations are not able to effectively monitor the areas. Due to this, the residents are facing severe problems.