
Shimoga BREAKING NEWS | ಶಿವಮೊಗ್ಗ : ರೌಡಿ ಶೀಟರ್ ಕಾಲಿಗೆ ಪೊಲೀಸ್ ಗುಂಡು! – ಕಾರಣವೇನು?
ಶಿವಮೊಗ್ಗ (shivamogga), ಅಕ್ಟೋಬರ್ 8: ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪದ ಮೇರೆಗೆ, ರೌಡಿ ಶೀಟರ್ ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ, ಶಿವಮೊಗ್ಗ ನಗರದಲ್ಲಿ ಅಕ್ಟೋಬರ್ 8 ರಂದು ನಡೆದಿದೆ.
ನ್ಯೂ ಮಂಡ್ಲಿ ಬಡಾವಣೆ ನಿವಾಸಿ ಅಕ್ಬರ್ (21) ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹಾಗೂ ಈತನ ದಾಳಿಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಏನಾಯ್ತು? : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ ಎಂ ಎಲ್ ನಗರದ ಬಳಿ ಇತ್ತೀಚೆಗೆ, ಅಮ್ಜದ್ ಹಾಗೂ ಆತನ ಸ್ನೇಹಿತರೋರ್ವರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಮ್ಜದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಸದರಿ ಪ್ರಕರಣದ ಆರೋಪಿಯಾಗಿದ್ದ ಅಕ್ಬರ್, ಘಟನೆಯ ನಂತರ ತಲೆಮರೆಸಿಕೊಂಡಿದ್ದ. ಪುರಲೆ ಬಳಿ ಆರೋಪಿಯಿರುವ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಆರೋಪಿಯು ಚಂದ್ರಾನಾಯ್ಕ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಮುಂದಾಗಿದ್ದ. ತಕ್ಷಣವೇ ಸ್ಥಳದಲ್ಲಿದ್ದ ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ರವರು, ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ.
ಆದಾಗ್ಯೂ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga, October 8: An incident took place in Shivamogga city on October 8 when a rowdy sheeter was arrested by the police after being shot in the leg on charges of attempting to attack the police who had gone to arrest him.