shimoga palike news | ಬೆಂಗಳೂರು, ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?

Will the government focus on forming a Shivamogga-Bhadravati Metropolitan City Corporation on the model of Bangalore and Mysore? ಬೆಂಗಳೂರು - ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?

ಶಿವಮೊಗ್ಗ (shivamogga), ಡಿಸೆಂಬರ್ 11: ಬರೋಬ್ಬರಿ 30 ವರ್ಷ ಕಳೆದರೂ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಮತ್ತೊಂದೆಡೆ, ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರಕ್ಕೆ ಇಲ್ಲಿಯವರೆಗೂ ವರದಿ ಸಲ್ಲಿಕೆಯಾಗಿಲ್ಲ!

ಈ ನಡುವೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಅಸ್ತಿತ್ವಕ್ಕೆ ತಂದ ರೀತಿಯಲ್ಲಿ, ಶಿವಮೊಗ್ಗ – ಭದ್ರಾವತಿ ಅವಳಿ ನಗರಗಳನ್ನೊಳಗೊಂಡಂತೆ ಬೃಹತ್ ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ತರಬೇಕೆಂಬ ಸಲಹೆ ಕೇಳಿಬರಲಾರಂಭಿಸಿದೆ.

ಬಂಗಾರಪ್ಪರ ಕ್ರಮ : 1992 ರಲ್ಲಿ ಎಸ್ ಬಂಗಾರಪ್ಪರವರು ಮುಖ್ಯಮಂತ್ರಿಯಾಗಿದ್ದ ವೇಳೆ, ಶಿವಮೊಗ್ಗ – ಭದ್ರಾವತಿ ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ತಂದಿದ್ದರು. ಎಸ್ ಬಂಗಾರಪ್ಪರ ದಿಟ್ಟ ಕ್ರಮವು ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವರು ಸಿಎಂ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ, ನಾನಾ ಆಡಳಿತಾತ್ಮಕ ಕಾರಣಗಳ ನೆಪವೊಡ್ಡಿ ಶಿವಮೊಗ್ಗ – ಭದ್ರಾವತಿ ಮಹಾನಗರ ಪಾಲಿಕೆ ಕೂಡ ರದ್ದುಗೊಳಿಸಲಾಗಿತ್ತು.

ತದನಂತರ 1994-95 ರಲ್ಲಿ ಶಿವಮೊಗ್ಗ ನಗರಸಭೆ ವ್ಯಾಪ್ತಿ ಪರಿಷ್ಕರಣೆ ಮಾಡಲಾಗಿತ್ತು. ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಗೋಪಿಶೆಟ್ಟಿಕೊಪ್ಪ, ನವುಲೆ, ಮಲವಗೊಪ್ಪ ಮೊದಲಾದ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿತ್ತು.

2013 ರಲ್ಲಿ ಶಿವಮೊಗ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಹಾಲಿಯಿದ್ದ ನಗರಸಭೆ ವ್ಯಾಪ್ತಿ ಹಾಗೂ ವಾರ್ಡ್ ಗಳನ್ನೇ ಉಳಿಸಿಕೊಳ್ಳಲಾಗಿತ್ತು. ತದನಂತರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಅಂದಿನ ಪಾಲಿಕೆ ಆಡಳಿತ ಹಾಲಿ ನಗರ ವ್ಯಾಪ್ತಿಯನ್ನೇ ಉಳಿಸಿಕೊಳ್ಳುವ ನಿರ್ಣಯ ಅಂಗೀಕರಿಸಿ, ಪಾಲಿಕೆ ವ್ಯಾಪ್ತಿ ವಿಸ್ತರಣೆಯ ಸದಾವಕಾಶವನ್ನು ಕೈಚೆಲ್ಲಿತ್ತು.

ನೆನೆಗುದಿಗೆ : ನಗರದ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ವ್ಯಾಪ್ತಿ ಪರಿಷ್ಕರಣೆ ಮಾಡಬೇಕೆಂಬ ಆಗ್ರಹ ಕಳೆದ ಹಲವು ವರ್ಷಗಳಿಂದಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪರಿಷ್ಕರಣೆ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಈ ನಡುವೆ ಕಳೆದ ಎರಡು ವರ್ಷಗಳ ಹಿಂದೆ ಪಾಲಿಕೆ ವ್ಯಾಪ್ತಿಯ ಪರಿಷ್ಕರಣೆಯ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಅಗತ್ಯ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಅದರಂತೆ ಈ ಹಿಂದಿನ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವದಿಯಲ್ಲಿ, ಗ್ರಾಮ ಪಂಚಾಯ್ತಿ ಅಧೀನದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಸರ್ವೇ ನಡೆಸಲಾಗಿತ್ತು. ಪ್ರತ್ಯೇಕ ಅಧಿಕಾರಿಗಳ ತಂಡಗಳನ್ನು ರಚಿಸಿ ವರದಿ ಸಿದ್ದಪಡಿಸಲಾಗಿತ್ತು. ಡ್ರೋನ್ ಮೂಲಕವೂ ಸರ್ವೆ ನಡೆಸಲಾಗಿತ್ತು.

ಪಾಲಿಕೆ ಆಡಳಿತವು ಸಮಗ್ರ ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತ್ತು. ಡಿಸಿ ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕೂಡ ನಡೆಸಲಾಗಿತ್ತು. ಇನ್ನೊಂದೆಡೆ, ಪಾಲಿಕೆ ಆಡಳಿತದ ವರದಿಯಲ್ಲಿ ಕೈಬಿಡಲಾಗಿದ್ದ ನಗರದಂಚಿನ ಹಲವು ಬಡಾವಣೆಗಳ ನಿವಾಸಿಗಳು ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಮನವಿ ಸಲ್ಲಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಜಿಲ್ಲಾಧಿಕಾರಿಗಳು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಬಗ್ಗೆ ಹಾಲಿ ಸಿದ್ದಪಡಿಸಿರುವ ವರದಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸಲ್ಲಿಸುವಂತೆ ಪಾಲಿಕೆಗೆ ಸೂಚಿಸಿದ್ದರು. ಆದರೆ ಡಿಸಿ ಸೂಚಿಸಿ ಹಲವು ತಿಂಗಳುಗಳೇ ಕಳೆದರೂ ಇಲ್ಲಿಯವರೆಗೂ ಡಿಸಿಗೆ ಪಾಲಿಕೆ ಆಡಳಿತದ ವರದಿ ಸಲ್ಲಿಕೆಯಾಗಿಲ್ಲ.

ಚಿತ್ತ ಹರಿಸಲಿ : ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ರೀತಿಯಲ್ಲಿ, ಶಿವಮೊಗ್ಗ – ಭದ್ರಾವತಿ ಅವಳಿ ನಗರಗಳನ್ನೊಳಗೊಂಡಂತೆ, ‘ಬೃಹತ್ ಮಹಾನಗರ ಪಾಲಿಕೆ ಆಡಳಿತ’ ಅಸ್ತಿತ್ವಕ್ಕೆ ತರಬೇಕು. ಇದಕ್ಕೆ ಅಗತ್ಯವಾದ ಜನಸಂಖ್ಯೆ, ವ್ಯಾಪ್ತಿ – ವಿಸ್ತೀರ್ಣ ಎರಡೂ ನಗರಗಳು ಹೊಂದಿವೆ ಎಂಬ ಅಭಿಪ್ರಾಯಗಳು ಕೇಳಿಬರಲಾರಂಭಿಸಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಭದ್ರಾವತಿ ಶಾಸಕರಾದ ಬಿ ಕೆ ಸಂಗಮೇಶ್ವರವರು ಗಮನಹರಿಸಬೇಕಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿಸಿದ ಸಚಿವರ ಜೊತೆ ಸಮಾಲೋಚಿಸಿ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಕೆಲ ಪ್ರಜ್ಞಾವಂತ ನಾಗರೀಕರ ಸಲಹೆಯಾಗಿದೆ.

*** ಎಸ್ ಬಂಗಾರಪ್ಪರವರು ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಮೊಗ್ಗ – ಭದ್ರಾವತಿ ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ತಂದಿದ್ದರು. ಆದರೆ ನಾನಾ ಆಡಳಿತಾತ್ಮಕ ಕಾರಣಗಳಿಂದ ಇದು ರದ್ದುಗೊಂಡಿತ್ತು. ಭವಿಷ್ಯದ ಯೋಜನಾಬದ್ದ ನಗರ ಬೆಳವಣಿಗೆ ದೃಷ್ಟಿಯಿಂದ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ತರಬೇಕು. ಇದರಿಂದ ಎರಡೂ ನಗರಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಎರಡೂ ನಗರಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಲಿದೆ. ಸರ್ಕಾರಗಳಿಂದಲೂ ಹೆಚ್ಚಿನ ಅನುದಾನ ಸೌಲಭ್ಯಗಳು ಲಭ್ಯವಾಗಲಿದೆ ಎಂದು ‘ನನ್ನ ಕನಸಿನ ಶಿವಮೊಗ್ಗ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಎನ್ ಗೋಪಿನಾಥ್ ಅವರು ಅಭಿಪ್ರಾಯಪಡುತ್ತಾರೆ.

Even after 30 years, the Shivamogga Municipal Administration area has not been revised. On the other hand, the municipal area revision that has been going on for the last two years has completely fallen into disrepair. The report has not been submitted to the state government till date! Meanwhile, suggestions have started to be heard that a megacity administration should be established to include the twin cities of Shivamogga and Bhadravati, similar to the Greater Bangalore Authority and the Greater Mysore City Corporation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

One Comment on “shimoga palike news | ಬೆಂಗಳೂರು, ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?”

Comments are closed.