ಶಿವಮೊಗ್ಗ, ಮೇ 5: 2022-23ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ, ಭದ್ರಾ ಜಲಾಶಯದಿಂದ ಬಲ ಹಾಗೂ ಎಡದಂಡೆ ನಾಲೆಗಳಿಗೆ ಹರಿಸಲಾಗುತ್ತಿರುವ ನೀರಿನ ಹರಿವನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸಲಾಗಿದೆ.
ಪ್ರಸ್ತುತ ಎಡದಂಡೆ ನಾಲೆಗೆ 01.01.2023 ರ ರಾತ್ರಿಯಿಂದ ಹಾಗೂ ಬಲದಂಡೆ ನಾಲೆಗೆ 03.01.2023 ರ ರಾತ್ರಿಯಿಂದ ನೀರನ್ನು ಹರಿಸಲಾಗುತ್ತಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ 2022-23ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಹೆಚ್ಚುವರಿ ದಿನಗಳಿಗೆ ನೀರನ್ನು ಹರಿಸಲು ಸರ್ಕಾರದ ಅನುಮೋದನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಭದ್ರಾ ಎಡದಂಡೆ ನಾಲೆಗೆ ಮೇ 12 ರವರೆಗೆ ಹಾಗೂ ಬಲದಂಡೆ ನಾಲೆಗೆ ಮೇ 18 ರವರೆಗೆ ಹೆಚ್ಚುವರಿಯಾಗಿ ನೀರನ್ನು ಹರಿಸಲಾಗುವುದು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರು ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

