ಶಿವಮೊಗ್ಗ (shivamogga), ಜೂನ್ 14: ಶಿವಮೊಗ್ಗದ ರೌಡಿ ಶೀಟರ್ ನರಸಿಂಹ ಹತ್ಯೆ ಪ್ರಕರಣದ ಆರೋಪಿಯೋರ್ವನ ಕಾಲಿಗೆ ಗುಂಡು ಹಾರಿಸುವ ಮೂಲಕ, ಪೊಲೀಸ್ ಇಲಾಖೆಯು ಪಾತಕ ಲೋಕಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸುವ ಕಾರ್ಯ ನಡೆಸಿದೆ.
ಹನುಮಂತ ಯಾನೆ ಮಧು (27) ಗುಂಡೇಟಿನಿಂದ ಗಾಯಗೊಂಡ ಆರೋಪಿ ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ನರಸಿಂಹ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 13 ರಂದು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದ ಐವರು ಆರೋಪಿಗಳಲ್ಲಿ ಈತನು ಓರ್ವನಾಗಿದ್ದ.
ಜೂನ್ 14 ರ ಬೆಳಿಗ್ಗೆ ಇನ್ಸ್’ಪೆಕ್ಟರ್ ಹರೀಶ್ ಪಾಟೀಲ್ ನೇತೃತ್ವದ ಪೊಲೀಸ್ ತಂಡವು, ತನಿಖೆಗಾಗಿ ಆರೋಪಿ ಮಧುವನ್ನು ನಗರದ ಹೊರವಲಯ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಿಂಭಾಗದ ಡಬ್ಬಲ್ ರಸ್ತೆಗೆ ಕರೆತಂದಿತ್ತು.
ಈ ವೇಳೆ ಆರೋಪಿಯು ಪೊಲೀಸ್ ಕಾನ್ಸ್’ಟೇಬಲ್ ಅಂಜಿನಪ್ಪ ಎಂಬುವರ ಮೇಲೆ ಲೀಡಿಂಗ್ ಚೈನ್ ನಿಂದ ಹಲ್ಲೆ ಮಾಡಿದ್ದ. ಈ ವೇಳೆ ಸ್ಥಳದಲ್ಲಿದ್ದ ಇನ್ಸ್’ಪೆಕ್ಟರ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ನಂತರ ಆರೋಪಿಯ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ವಾರ್ನಿಂಗ್ : ಇತ್ತೀಚೆಗೆ ಭದ್ರಾವತಿ, ಶಿವಮೊಗ್ಗ ನಗರದಲ್ಲಿ ಪಾತಕ ಲೋಕದ ಚಟುವಟಿಕೆ ಕ್ರಮೇಣ ಹೆಚ್ಚಾಗಲಾರಂಭಿಸಿತ್ತು. ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ಪ್ರಕರಣಗಳು ವರದಿಯಾಗಿದ್ದವು. ಮತ್ತೊಂದೆಡೆ, ರೌಡಿ ಟೀಂಗಳ ದಾಳಿ – ಪ್ರತಿದಾಳಿಗಳು ಹೆಚ್ಚಾಗುವ ಲಕ್ಷಣಗಳು ಕಂಡುಬಂದಿದ್ದವು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆರೋಪಿಯೋರ್ವನ ಕಾಲಿಗೆ ಗುಂಡು ಹಾರಿಸುವ ಮೂಲಕ ಪಾತಕ ಲೋಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ಹೇಳಲಾಗುತ್ತಿದೆ.

