ಶಿವಮೊಗ್ಗ (shivamogga), ಜೂನ್ 21: ಬಾಲಕಿಯನ್ನು ವಿವಾಹವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಯುವಕ ಮತ್ತು ಇದಕ್ಕೆ ಸಹಕಾರ ನೀಡಿದ್ದ ಆತನ ಮೂವರು ಸಂಬಂಧಿಗಳಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್’ಟಿಎಸ್’ಸಿ – 1} ತೀರ್ಪು ನೀಡಿದೆ.
ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ 1.85 ಲಕ್ಷ ರೂ. ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಅವರು 20/6/2026 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಹೆಚ್ ಆರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ರಲ್ಲಿ ಪ್ರಕರಣ ವರದಿಯಾಗಿತ್ತು. 17 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ 27 ವರ್ಷದ ಯುವಕನು, ಸದರಿ ಬಾಲಕಿಯನ್ನು ವಿವಾಹವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಯುವಕನ ಕೃತ್ಯಕ್ಕೆ ಆತನ ಸಂಬಂಧಿಕರು ಸಹಕಾರ ನೀಡಿದ್ದರು.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಬಾಲ್ಯ ವಿವಾಹ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು. ಅಂದಿನ ಕುಂಸಿ ಠಾಣೆ ಇನ್ಸ್’ಪೆಕ್ಟರ್ ಹರೀಶ್ ಕೆ ಪಾಟೀಲ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Child Marriage Case: Four Sentenced to 20 Years Rigorous Imprisonment!

