shimoga news | ಶಿವಮೊಗ್ಗ ತಾಲೂಕಿನ ಕೆರೆಗಳಿಗೆ ಆಸರೆಯಾದ ತುಂಗಾ ನದಿ!

Demand to release water from Tunga River to lakes in Shivamogga taluk

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜುಲೈ 25: ಪ್ರಸ್ತುತ ವರ್ಷ ಶಿವಮೊಗ್ಗ ತಾಲೂಕಿನಲ್ಲಿಯೂ ಮುಂಗಾರು ಮಳೆಯ ತೀವ್ರ ಕೊರತೆ ಎದುರಾಗಿದೆ. ಮಳೆಯ ಪ್ರಮಾಣ ಇಳಿಕೆಯಾಗಿದೆ. ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಬರದ ಕಾರ್ಮೋಡ ಆವರಿಸಿದೆ. ಆದರೆ ತಾಲೂಕಿನ ಹಲವು ಗ್ರಾಮಗಳ ಕೆರೆಗಳಿಗೆ ತುಂಗಾ ನದಿ ನೀರು ಆಸರೆಯಾಗಿದೆ!

ಹೌದು. ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. ಡ್ಯಾಂನಿಂದ ನದಿ ಹಾಗೂ ಕಾಲುವೆಗಳಿಗೆ ನೀರು ಹೊರ ಬಿಡಲಾಗುತ್ತಿದೆ.

ತುಂಗಾ ನದಿಯಿಂದ ಪೈಪ್ ಲೈನ್ ಮೂಲಕ ತಾಲೂಕಿನ ವಿವಿಧ ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಕಳೆದ ಕೆಲ ದಿನಗಳಿಂದ ಸದರಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ತುಂಗಾ ನದಿ ನೀರು ಹರಿಸಲಾಗುತ್ತಿದೆ.

ಇದರಿಂದ ಮಳೆ ಕೊರತೆಯ ನಡುವೆಯೂ ತಾಲೂಕಿನ ಹಲವು ಗ್ರಾಮಗಳ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಲಾರಂಭಿಸಿದೆ. ಸದ್ಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಕೊಂಚ ಚುರುಕುಗೊಂಡಿರುವುದರಿಂದ ತುಂಗಾ ಡ್ಯಾಂನ ಒಳಹರಿವು ನಿರಂತರವಾಗಿದೆ.

ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊರ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ನೀರಿನ ಹರಿವು ಮುಂದುವರೆದಿರುವುದರಿಂದ, ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತಾಗಿದೆ.

ಹೆಚ್ಚಾಗಲಿ : ‘ಪ್ರಸ್ತುತ ಕೆಲವೆಡೆ ಹಗಲು ವೇಳೆ ಮಾತ್ರ ತುಂಗಾ ನದಿಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ವಿದ್ಯುತ್ ವ್ಯತ್ಯಯ ಮತ್ತೀತರ ಕಾರಣಗಳು ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಂತಾಗಿದೆ. ತುಂಗಾ ನದಿಯಲ್ಲಿ ನೀರು ಹರಿಯುತ್ತಿರುವ ಕಾರಣದಿಂದ ದಿನದ 24 ಗಂಟೆಗಳ ಕಾಲ ಕೆರೆಗಳಿಗೆ ನೀರು ಹರಿಸುವ ಕಾರ್ಯವಾಗಬೇಕು.

ಇದರಿಂದ ಕೆರಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಮತ್ತಷ್ಟು ಹೆಚ್ಚಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ತುಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ, ಕೆರೆಗಳಿಗೆ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತದೆ. ಈ ಕಾರಣದಿಂದ ನದಿಯಲ್ಲಿ ನೀರು ಹರಿಯುವ ಸಂದರ್ಭದಲ್ಲಿಯೇ ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು.

ಇದರಿಂದ ಮುಂದಿನ ದಿನಗಳಲ್ಲಿ ಮಳೆ ಕೊರತೆ ಎದುರಾದರೂ ಕೆರೆಕಟ್ಟೆಗಳಲ್ಲಿ ನೀರು ಲಭ್ಯವಾಗಲಿದೆ. ಚಳಿಗಾಲ, ಬೇಸಿಗೆ ವೇಳೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಕೆಲ ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.

ಒಟ್ಟಾರೆ ತುಂಗಾ ನದಿಯು ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ಕೆರೆಕಟ್ಟೆಗಳಿಗೆ ಜೀವಸೆಲೆಯಾಗಿ ಪರಿಣಮಿಸಿದೆ. ಮಳೆ ಕೊರತೆಯ ನಡುವೆಯೂ ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ಕೆರೆಕಟ್ಟೆಗಳು ನಳನಳಿಸುವಂತಾಗಿದೆ.

Tunga River is the support for the lakes of Shivamogga Taluk! | Shivamogga, July 25: This year, Shivamogga Taluk is also facing a severe shortage of monsoon rains. The amount of rain has decreased. The expected amount of water has not accumulated in the lakes. The dark clouds of drought have covered the area. But the Tunga River is the support for the lakes of many villages in the taluk!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *