ಶಂಕರಘಟ್ಟ (ಶಿವಮೊಗ್ಗ), ನವೆಂಬರ್ 03: ಸಾಮಾಜಿಕ ಮಾಧ್ಯಮ ಮೂಲದ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇಂದಿನ ಯುವಪೀಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿವಿಯ 40ನೇ ಸಂಸ್ಥಾಪನಾ ದಿನ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಇನ್ಸ್ಟಾಗ್ರಾಂ, ಎಕ್ಸ್, ವಾಟ್ಸ್ಯಾಪ್ ನಂತಹ ಸಾಮಾಜಿಕ ವೇದಿಕೆಗಳಲ್ಲಿ ನಮ್ಮ ಗುರುತುಗಳನ್ನು ಮರೆಮಾಚಿ ಅಥವಾ ತಮಗರಿವಿಲ್ಲದಂತೆಯೇ ಮಾಡುವ ಯಾವುದೇ ಕಾನೂನು ಬಾಹಿರ ಪೋಸ್ಟ್ ಗಳು, ಕಾಮೆಂಟ್ ಗಳು ವಿದ್ಯಾರ್ಥಿಗಳ ಮುಂದಿನ ವೃತ್ತಿಜೀವನಕ್ಕೆ ಮತ್ತು ಭವಿಷ್ಯಕ್ಕೆ ಮಾರಕವಾಗಲಿದೆ. ಒಂದು ಬಾರಿ ಲಾಗಿನ್ ಆಗಿ ಡಿಜಿಟಲ್ ಮಾಧ್ಯಮ ಬಳಸಿದರೆ ಸಾಕು. ನಿಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿಹಾಕಲಾಗುವುದಿಲ್ಲ. ಹೀಗಾಗಿ, ಇಂತಹಾ ಚಟುವಟಿಕೆಗಳಿಂದ ದೂರವಿರಿ ಎಂದು ಕಿವಿ ಮಾತು ಹೇಳಿದರು.
ಇನ್ನು ಕೃತಕ ಬುದ್ಧಿಮತ್ತೆ ಎಲ್ಲ ರಂಗಗಳನ್ನು ಆವರಿಸಿಕೊಳ್ಳುತ್ತಿದ್ದು ಇದಕ್ಕೆ ಶೈಕ್ಷಣಿಕ ಕ್ಷೇತ್ರ ಕೂಡ ಹೊರತಲ್ಲ. ಜೆಮಿನಿ, ಚಾಟ್ ಜಿಪಿಟಿ, ಕ್ಲಾಡ್ ನಂತಹ ಎಐ ಸಾಧನಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿ ಬಳಕೆಯಾಗಬೇಕೇ ವಿನಃ, ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾದರೆ ಮುಂದೆ ಸರಕಾರಿ ಹಾಗೂ ಕಾರ್ಪೊರೆಟ್ ಕ್ಷೇತ್ರದ ಉದ್ಯೋಗಗಳಿಗೆ ಆಯ್ಕೆಯ ವೇಳೆ ನಿರಾಶೆಯಾಗುವುದು ಖಂಡಿತ ಎಂದು ಎಚ್ಚರಿಸಿದರು.
ಉನ್ನತ ಶಿಕ್ಷಣ ಪಡೆದ ಇಂದಿನ ಯುವ ಜನಾಂಗ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆಯ ಸಂಕೇತ ಎಂದು ಆಲೋಚಿಸುವುದು ಸಹಜ. ಆದರೆ, ಇಂಥಹಾ ಹುದ್ದೆಗಳು ದೊರಕದವರು ನಿರಾಶರಾಗಬೇಕಿಲ್ಲ. ಯಾವುದೇ ಉದ್ಯೋಗ ಆಯ್ದುಕೊಂಡರೂ ಅದನ್ನು ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಸಾಧನೆ ಎಂದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರಿಯಾಶೀಲರಾಗಿರಬೇಕು. ಮುಂಬರುವ ದಿನಗಳಲ್ಲಿ ವಿಶಿಷ್ಟ ಕಲಿಕಾ ವಿಚಾರಗಳು ಮತ್ತು ಅನುಭವಗಳಿಗೆ ವಿಶ್ವವಿದ್ಯಾಲಯವು ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ. ಜಿ. ಪ್ರಶಾಂತ್ ನಾಯಕ್, ಡೀನರುಗಳಾದ ಪ್ರೊ. ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಗಜಾನನ ಪ್ರಭು, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. #kuvempuuniversity #shimoga #shivamogga #NewsUpdate #shimogasp
Shivamogga SP Nikhil B Advises Students to Use Social Media and AI Responsibly | Shankaraghatta (Shivamogga), November 03: Shivamogga District Superintendent of Police (SP) Nikhil B urged students to use social media platforms and Artificial Intelligence (AI) responsibly. He emphasized that, given the current rise in unethical activities stemming from social media, such responsible usage is crucial for the students’ own future well-being. He spoke at the 40th Foundation Day celebration of Kuvempu University and the welcome ceremony for first-year students, held on Tuesday at the university’s Basava Sabhabhavana.

