ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 17: ಇತ್ತೀಚೆಗೆ ಅಧಿಕಾರಿಗಳ ತಂಡ ಶಿವಮೊಗ್ಗ ನಗರದ ವಿವಿಧೆಡೆ ಹೋಟೆಲ್, ಬೇಕರಿ, ಜ್ಯೂಸ್ ಸೆಂಟರ್, ಸರ್ಕಾರಿ ಹಾಸ್ಟೆಲ್ ಸೇರಿದಂತೆ ಮೊದಲಾದೆಡೆ ದಿಡೀರ್ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದೆ. ತಪಾಸಣೆ ವೇಳೆ ಆಹಾರದ ಗುಣಮಟ್ಟದಲ್ಲಿ ಹಲವು ಲೋಪದೋಷಗಳು ಬೆಳಕಿಗೆ ಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ!
ಕೆಲವೆಡೆ ಆಹಾರ ತಯಾರಿಕೆ ಅಯೋಗ್ಯವಾದ ಕೊಳೆತ ತರಕಾರಿ, ಹಣ್ಣುಗಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ತಯಾರಿಕೆ ವೇಳೆ ಅನುಸರಿಸಬೇಕಾದ ಕನಿಷ್ಠ ಮಾರ್ಗಸೂಚಿಗಳನ್ನು ಪಾಲನೆ ಮಾಡದಿರುವುದು ಪತ್ತೆಯಾಗಲಾರಂಭಿಸಿದೆ.
ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ನಾಗರಿಕರು ಹಣ ಕೊಟ್ಟು ಅನಾರೋಗ್ಯ ತಂದುಕೊಳ್ಳುವಂತಾಗಿದೆ. ಇದರಿಂದ ಜೀವ ಕಳೆದುಕೊಳ್ಳುವಂತಾಗಿದೆ. ಕೆಲ ದುರಾಸೆ ಮನಸ್ಥಿತಿಯ ವ್ಯಾಪಾರಿಗಳು, ನಾಗರಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ನಿರಂತರವಾಗಿ ನಡೆಯಲಿ : ಶಿವಮೊಗ್ಗ ನಗರದಲ್ಲಿ ಆಹಾರದ ಗುಣಮಟ್ಟ ಪರಿಶೀಲನೆಯು ನೆಪಮಾತ್ರವೆಂಬಂತಾಗಿತ್ತು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಮೌನವಾಗಿದ್ದರು. ಕಾಟಾಚಾರಕ್ಕೆಂಬಂತೆ ತಪಾಸಣೆ ಪ್ರಕ್ರಿಯೆ ನಡೆಸುತ್ತಿದ್ದ ಆರೋಪಗಳಿದ್ದವು.
ಯು ಟಿ ಖಾದರ್ ಆರೋಗ್ಯ ಸಚಿವರಾದ ನಂತರ, ಶಿವಮೊಗ್ಗ ನಗರದಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆ ಚುರುಕುಗೊಂಡಿದೆ. ಅಧಿಕಾರಿಗಳ ತಂಡ ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲನೆ ನಡೆಸುವ ಕಾರ್ಯ ಆರಂಭಿಸಿದ್ದು, ಈ ವೇಳೆ ಆಹಾರದ ಗುಣಮಟ್ಟ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ನಾನಾ ಲೋಪಗಳು ಬೆಳಕಿಗೆ ಬರಲಾರಂಭಿಸಿವೆ.
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಅಧಿಕಾರಿಗಳ ತಂಡವು ಹೋಟೆಲ್, ಜ್ಯೂಸ್ ಸೆಂಟರ್ ಗಳಲ್ಲಿ ನಡೆಸುತ್ತಿರುವ ತಪಾಸಣೆಯ ವಿಡಿಯೋ, ಪೋಟೋ, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಶಿವಮೊಗ್ಗದ ಜ್ಯೂಸ್ ಸೆಂಟರ್ ವೊಂದರ ತಪಾಸಣೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಹರಿದಾಡುತ್ತಿದೆ. ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ರೀತಿಯ ತಪಾಸಣೆಗಳು ನಿರಂತರವಾಗಿ ಅಧಿಕಾರಿಗಳ ತಂಡ ನಡೆಸಬೇಕು. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ, ನಿಷೇಧಿತ ಟೇಸ್ಟಿಂಗ್ ವಸ್ತುಗಳ ಬಳಕೆ ಮಾಡಿ ನಾಗರಿಕರ ಆರೋಗ್ಯ ಹಾಗೂ ಜೀವದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಹಾಗೆಯೇ ವ್ಯಾಪಾರಿಗಳು ಹಾಗೂ ತಯಾರಿಕಾ ಸಂಸ್ಥೆಗಳಿಗೆ ಜಾಗೃತಿ ಮೂಡಿಸಬೇಕು ಎಂಬ ಅಗ್ರಹ ಪ್ರಜ್ಞಾವಂತ ನಾಗರಿಕರಿಂದ ಕೇಳಿಬರಲಾರಂಭಿಸಿದೆ.
ಒಟ್ಟಾರೆ ಕಳಪೆ ಆಹಾರ ಪೂರೈಕೆ ಮಾಡುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಗುಣಮಟ್ಟದ ಆಹಾರ – ತಿನಿಸು, ಪಾನೀಯಗಳು ನಾಗರಿಕರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯವಿರುವ ಎಲ್ಲ ರೀತಿಯ ಕ್ರಮಕೈಗೊಳ್ಳಲಿ ಎಂಬುವುದು ಜನಸಾಮಾನ್ಯರ ಆಗ್ರಹವಾಗಿದೆ.
ಪಾಲಿಕೆ ಆಡಳಿತವೂ ತಪಾಸಣೆ ನಡೆಸಲಿ
ಶಿವಮೊಗ್ಗ ನಗರದಲ್ಲಿರುವ ಹೋಟೆಲ್, ರೆಸ್ಟೋರೆಂಟ್, ತಿಂಡಿ – ತಿನಿಸು ತಯಾರಿಸುವ ಕೇಂದ್ರಗಳು, ಜ್ಯೂಸ್ ಸೆಂಟರ್, ಬೇಕರಿ ಸೇರಿದಂತೆ ನಾಗರಿಕರಿಗೆ ಆಹಾರೋತ್ಪನ್ನಗಳ ಪೂರೈಕೆ ಹಾಗು ತಯಾರಿಸುವ ಕೇಂದ್ರಗಳಿಗೆ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಹೆಲ್ತ್ ಇನ್ಸ್’ಪೆಕ್ಟರ್ ಗಳು ನಿರಂತರವಾಗಿ ಭೇಟಿ ನೀಡಬೇಕು. ಅಲ್ಲಿನ ಸ್ವಚ್ಛತೆ ಮತ್ತೀತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಾರೆ.
ಲ್ಯಾಬ್ ವರದಿ ಬಹಿರಂಗಪಡಿಸಲಿ
*** ಇತ್ತೀಚೆಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ತಹಶೀಲ್ದಾರ್ ರಾಜೀವ್ ಅವರು ನಿರಂತರವಾಗಿ ವಿವಿಧೆಡೆ ದಿಡೀರ್ ಭೇಟಿಯಿತ್ತು ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಕೆಲವೆಡೆ ತಯಾರಾದ ಆಹಾರ ಸಾಮಗ್ರಿಗಳ ಸ್ಯಾಂಪಲ್ ಸಂಗ್ರಹಿಸಿ, ಅದರ ಗುಣಮಟ್ಟ ಪರಿಶೀಲನೆಗಾಗಿ ಪ್ರಯೋಗಾಲಯದ (ಲ್ಯಾಬ್) ತಪಾಸಣೆಗೆ ಕಳುಹಿಸಿದ್ದಾರೆ. ಪ್ರಯೋಗಾಲಯದ ವರದಿ ವಿವರಗಳನ್ನು ಗುಪ್ತವಾಗಿಡದೆ, ನಾಗರಿಕರ ಗಮನಕ್ಕೆ ತರುವ ಕಾರ್ಯವನ್ನು ಅಧಿಕಾರಿಗಳ ತಂಡ ಮಾಡಬೇಕಾಗಿದೆ. ಇದರಿಂದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗೆಯೇ ಕಳಪೆ ಗುಣಮಟ್ಟದ ಆಹಾರ ತಯಾರಿಸುವವರಿಗೆ ಎಚ್ಚರಿಕೆಯ ಪಾಠವಾಗಲಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಸಲಹೆಯಾಗಿದೆ.
Shivamogga, September 17: A team of officials has recently been conducting surprise inspections at various locations across Shivamogga city including hotels – bakeries – juice centers and government hostels. It is a matter of concern that several lapses regarding food quality are coming to light during these checks!

