ವರದಿ : ಬಿ ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 29: ರಸ್ತೆಗೆ ಮೀಸಲಿರಿಸಿದ ಜಾಗಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಪಶುವೈದ್ಯಕೀಯ ಕಾಲೇಜ್ ಆಡಳಿತ ಹಾಗೂ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿದೆ!
‘ಸುಗಮ ಜನ-ವಾಹನ ಸಂಚಾರದ ಉದ್ದೇಶದಿಂದ, ರಸ್ತೆ ನಿರ್ಮಾಣಕ್ಕೆಂದು ಮೀಸಲಿರಿಸಿರುವ ಜಾಗಕ್ಕೆ ಹಾಕಿರುವ ಕಾಂಪೌಂಡ್ ತೆರವುಗೊಳಿಸಬೇಕು’ ಎಂದು ನಗರಾಭಿವೃದ್ದಿ ಪ್ರಾಧಿಕಾರವು ಪಶುವೈದ್ಯಕೀಯ ಕಾಲೇಜ್ ಆಡಳಿತಕ್ಕೆ ನಿರಂತರವಾಗಿ ಆಗ್ರಹಿಸಿಕೊಂಡು ಬರುತ್ತಿದೆ.
ಮತ್ತೊಂದೆಡೆ, ಕಾಲೇಜ್ ಆಡಳಿತ ಮಾತ್ರ ರಸ್ತೆ ಜಾಗಕ್ಕೆ ಹಾಕಿರುವ ಕಾಂಪೌಂಡ್ ತೆರವುಗೊಳಿಸುತ್ತಿಲ್ಲ. ಈ ಗೊಂದಲದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 29 ರಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಅವರು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ತಂಡದೊಂದಿಗೆ, ಕಾಲೇಜ್ ಗೆ ಭೇಟಿ ನೀಡಿದ್ದರು.
ರಸ್ತೆ ಹಾದು ಹೋಗುವ ಸ್ಥಳ ಪರಿಶೀಲನೆ ನಡೆಸಿದರು. ತದನಂತರ ಪಶುವೈದ್ಯಕೀಯ ಕಾಲೇಜ್ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
‘ನಗರದ ಸಾರ್ವಜನಿಕ ರಸ್ತೆಗಳು ಮತ್ತು ಮೂಲಸೌಕರ್ಯಗಳು ನಾಗರಿಕರಿಗೆ ಅತ್ಯಂತ ಅವಶ್ಯಕ. ನಗರಾಭಿವೃದ್ದಿ ಪ್ರಾಧಿಕಾರದ ಪರಿಶೀಲನಾ ಪತ್ರದಂತೆ ನಿಯಮಾನುಸಾರ ರಸ್ತೆಗೆ ಮೀಸಲಾದ ಜಾಗ ಬಿಡಬೇಕು. ಈ ನಿಟ್ಟಿನಲ್ಲಿ ಶಾಶ್ವತ ಹಾಗೂ ಕಾನೂನುಬದ್ದ ಕ್ರಮಗಳಾಗಬೇಕು’ ಎಂದು ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪರವರು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಬಿ ಆರ್ ಮಂಜುನಾಥ್, ಎಇಇ ಬಸವರಾಜಪ್ಪ ಜಿ ಆರ್, ಟಿಪಿಎಂ ಅಭಿಲಾಷ್, ಪಿಡಬ್ಲ್ಯೂಡಿ ಎಂಜಿನಿಯರ್, ಪಶುವೈದ್ಯಕೀಯ ಕಾಲೇಜ್ ನ ಪ್ರಮುಖರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಏನೀದು ಸಮಸ್ಯೆ? : ಈ ಹಿಂದೆ ನಗರಾಭಿವೃದ್ದಿ ಪ್ರಾಧಿಕಾರವು ಬಡಾವಣೆ ನಿರ್ಮಾಣಕ್ಕೆಂದು ಭೂ ಸ್ವಾದೀನ ಪಡಿಸಿಕೊಂಡಿದ್ದ ಜಾಗದಲ್ಲಿ, ರಾಜ್ಯ ಸರ್ಕಾರದ ಆದೇಶದಂತೆ ಪಶುವೈದ್ಯಕೀಯ ಕಾಲೇಜ್ ನಿರ್ಮಾಣಕ್ಕೆ ಸುಮಾರು 240 ಎಕರೆ ಭೂಮಿಯನ್ನು ಹಸ್ತಾಂತರಿಸಿತ್ತು.
ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸಿದ್ದ ಮಾಸ್ಟರ್ ಪ್ಲ್ಯಾನ್ ನಲ್ಲಿ ಕಾಶೀಪುರ ಫ್ಲೈ ಓವರ್ ಬಳಿಯಿಂದ ರೈಲ್ವೆ ಹಳಿಗೆ ಸಮಾನಂತರವಾಗಿ ಕೋಟೆಗಂಗೂರು ರಸ್ತೆವರೆಗೆ, 40 ಅಡಿ ಅಗಲದ ರಸ್ತೆ ನಿರ್ಮಾಣದ ಯೋಜನೆ ರೂಪಿಸಿತ್ತು. ಅದರಂತೆ ಈ ಹಿಂದೆ ಪಿಡಬ್ಲ್ಯೂಡಿಯು ಕಾಶೀಪುರ ಫ್ಲೈ ಓವರ್ ಸಮೀಪದಿಂದ ಪಶುವೈದ್ಯಕೀಯ ಕಾಲೇಜ್ ವರೆಗೆ ರಸ್ತೆ ನಿರ್ಮಿಸಿತ್ತು.
ಒತ್ತಡ : ಈ ನಡುವೆ ಕಳೆದ ಕೆಲ ವರ್ಷಗಳಿಂದ ಪಶುವೈದ್ಯಕೀಯ ಕಾಲೇಜ್ ಬಳಿಯಿಂದ ಕೋಟೆಗಂಗೂರುವರೆಗೆ ರಸ್ತೆ ನಿರ್ಮಿಸಬೇಕೆಂಬ ಆಗ್ರಹ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ರಸ್ತೆ ಅಭಿವೃದ್ದಿಪಡಿಸಲು ನಿರ್ಧರಿಸಿದೆ. ಆದರೆ ಕಾಲೇಜ್ ಆಡಳಿತವು ರಸ್ತೆಗೆ ಸೇರಿದ 820 ಅಡಿ ಉದ್ದದ ಜಾಗಕ್ಕೆ ಕಾಂಪೌಂಡ್ ಹಾಕಿಕೊಂಡಿದೆ.
ಪ್ರಾಧಿಕಾರದ ನಿರಂತರ ಬೇಡಿಕೆಯ ಹೊರತಾಗಿಯೂ, ಕಾಲೇಜ್ ಆಡಳಿತವು ತನ್ನ ಮಾಲೀಕತ್ವದಲ್ಲಿರುವ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬಿಟ್ಟು ಕೊಡುವುದಿಲ್ಲವೆಂದು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರವು ಶಾಸಕ ಚನ್ನಬಸಪ್ಪರವರ ಮೊರೆ ಹೋಗಿದೆ. ಇದೀಗ ಶಾಸಕರು ಖುದ್ದು ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವಂತೆ ಸೂಚಿಸಿದ್ದಾರೆ.
ಜೊತೆಗೆ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆ. ಒಟ್ಟಾರೆ ಪಶುವೈದ್ಯಕೀಯ ಕಾಲೇಜ್ ಆಡಳಿತವು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡಲಿದೆಯಾ? ಇಲ್ಲವೇ? ಎಂಬುವುದು ಕುತೂಹಲ ಮೂಡಿಸಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ರಸ್ತೆಗೆ ಮೀಸಲಾದ ಜಾಗ ತೆರವಿಗೆ ಶಾಸಕರ ಸೂಚನೆ
*** ‘ನಗರದ ಸಾರ್ವಜನಿಕ ರಸ್ತೆಗಳು ಮತ್ತು ಮೂಲಸೌಕರ್ಯಗಳು, ನಾಗರಿಕರಿಗೆ ಅತ್ಯಂತ ಅವಶ್ಯಕ. ನಗರಾಭಿವೃದ್ದಿ ಪ್ರಾಧಿಕಾರದ ಪರಿಶೀಲನಾ ಪತ್ರದಂತೆ ನಿಯಮಾನುಸಾರ ರಸ್ತೆಗೆ ಮೀಸಲಾದ ಜಾಗ ಬಿಡಬೇಕು. ಈ ನಿಟ್ಟಿನಲ್ಲಿ ಶಾಶ್ವತ ಹಾಗೂ ಕಾನೂನುಬದ್ದ ಕ್ರಮಗಳಾಗಬೇಕು’ ಎಂದು ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪರವರು ಸೂಚಿಸಿದ್ದಾರೆ.
Shivamogga: Tug-of-war between Urban Development Authority and Veterinary College over road land – MLA inspects the site! | Shivamogga, September 29: A dispute has arisen between the administration of the Government Veterinary College and the Shivamogga-Bhadravathi Urban Development Authority regarding land earmarked for a road.
The Urban Development Authority has been consistently urging the Veterinary College administration to remove the compound wall erected on the land reserved for road construction, which is intended to facilitate smooth pedestrian and vehicular traffic.

