shimoga news | ಶಿವಮೊಗ್ಗದ ಬೈಪಾಸ್ ರಸ್ತೆ ಪೂರ್ಣಕ್ಕೆ ಹಾಗೂ ಹೆದ್ದಾರಿ ಡಾಂಬರೀಕರಣಕ್ಕೆ 466.74 ಕೋಟಿ ರೂ. ಅನುದಾನ ಮಂಜೂರು!

shimoga ourter ring road - mp byr---

ಶಿವಮೊಗ್ಗ (shivamogga), ಅಕ್ಟೋಬರ್ 04: ಶಿವಮೊಗ್ಗ ನಗರದಲ್ಲಿ ಬಾಕಿ ಉಳಿದಿದ್ದ ಬೈಪಾಸ್ ರಸ್ತೆ ನಿರ್ಮಾಣ ಹಾಗೂ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟಾರೆ 466.74 ರೂ. ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತಂತೆ ಅಕ್ಟೋಬರ್ 04 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಂಸದರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-206 (ಹೊಸ ರಾಷ್ಟ್ರೀಯ ಹೆದ್ದಾರಿ-69) ರಲ್ಲಿ ಬಾಕಿ ಉಳಿದಿರುವ ಶಿವಮೊಗ್ಗ ನಗರ ಬೈಪಾಸ್ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಜೊತೆಗೆ, ನಗರ ವ್ಯಾಪ್ತಿಯಲ್ಲಿನ ಹಾಲಿ ನಾಲ್ಕು ಪಥದ ಹೆದ್ದಾರಿಯ ಮರು ಡಾಂಬರೀಕರಣ ಕಾಮಗಾರಿಯನ್ನೂ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

466.74 ಕೋಟಿ ರೂ. ಅನುದಾನದ ವಿವರ : ಮಂಜೂರಾದ ಒಟ್ಟು 466.74 ಕೋಟಿ ರೂ. ಮೊತ್ತವನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ಬಳಸಲಾಗುತ್ತದೆ. 4.74 ಕಿ.ಮೀ. ನಾಲ್ಕು ಪಥದ ಬೈಪಾಸ್ ರಸ್ತೆ ಹಾಗೂ ಅಂಡರ್ ಪಾಸ್ ನಿರ್ಮಾಣ ಕ್ಕೆ 219.74 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ.

ಹೊಸದಾಗಿ ಅನುಮೋದಿಸಲಾದ ಪಥ ನಕ್ಷೆಯಂತೆ, ಹರಿಗೆಯಿಂದ ಪೊದಾರ್ ಶಾಲೆಯ ಪಕ್ಕದಿಂದ ವಿಮಾನ ನಿಲ್ದಾಣ ರಸ್ತೆಯ ಮೂಲಕ ಊರುಗಡೂರುವರೆಗೆ ಸುಮಾರು 4.74 ಕಿ.ಮೀ. ಉದ್ದದ ನಾಲ್ಕು ಪಥದ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಭೂಸ್ವಾಧೀನ, ಯುಟಿಲಿಟಿ ಸ್ಥಳಾಂತರಕ್ಕೆ 230 ಕೋಟಿ ರೂ. : ಬೈಪಾಸ್ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಹಾಗೂ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವ ವಿವಿಧ ಯುಟಿಲಿಟಿಗಳನ್ನು ಸ್ಥಳಾಂತರಿಸುವ ಕಾರ್ಯಗಳಿಗೆ 230 ಕೋಟಿ ರೂ. ಮೀಸಲಿಡಲಾಗಿದೆ.

3.12 ಕಿ.ಮೀ. ಹೆದ್ದಾರಿ ಮರು ಡಾಂಬರೀಕರಣಕ್ಕೆ 17 ಕೋಟಿ : ಎಂ.ಆರ್.ಎಸ್. ವೃತ್ತದಿಂದ ಬೈಪಾಸ್ ಮಾರ್ಗವಾಗಿ ಸಂದೇಶ ಮೋಟಾರ್ಸ್, ಬಸ್‌ಸ್ಟ್ಯಾಂಡ್ ವೃತ್ತ, ಹಾಲ್ಕೊಳ ವೃತ್ತ, ಗಾಡಿಕೊಪ್ಪದ ಮೂಲಕ ಶ್ರೀರಾಂಪುರದವರೆಗೆ ಸಾಗುವ ಸುಮಾರು 12 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆಗೆ ಮರು ಡಾಂಬರೀಕರಣ ಹಾಗೂ ಅಗತ್ಯ ಸುಧಾರಣಾ ಕಾಮಗಾರಿಗಳಿಗೆ 17 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸ್ಕೈವಾಕ್ – ಕಿರು ಸೇತುವೆಗೆ ಪ್ರಸ್ತಾವನೆ : ಇದಲ್ಲದೆ, ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಎಂ.ಆರ್.ಎಸ್. ವೃತ್ತ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ ಮತ್ತು ದ್ವಾರಕಾ ಕನ್ವೆನ್ಷನ್ ಹಾಲ್ ಬಳಿ ಕಿರು ಸೇತುವೆ ನಿರ್ಮಾಣ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಈ ಕಾಮಗಾರಿಗಳಿಗೂ ಶೀಘ್ರದಲ್ಲೇ ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ನಗರ ಹಾಗೂ ಮಲೆನಾಡಿನ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ 466.74 ಕೋಟಿ ಅನುದಾನ ಮಂಜೂರು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೆನೆ.

ಶಿವಮೊಗ್ಗದ ಸಮಗ್ರ ಅಭಿವೃದ್ಧಿಯ ಭಾಗವಾಗಿ ರಸ್ತೆ, ರೈಲು, ವಿಮಾನ ಹಾಗೂ ಇತರೆ ಸಂಪರ್ಕ ಮೂಲಸೌಕರ್ಯಗಳನ್ನು ಬಲಪಡಿಸುವ ನಮ್ಮ ಪ್ರಯತ್ನ ನಿರಂತರವಾಗಿರಲಿದೆ. ಈ ಯೋಜನೆಯ ಸಂಪೂರ್ಣ ಪ್ರಯೋಜನ ಶಿವಮೊಗ್ಗ ಹಾಗೂ ಮಲೆನಾಡಿನ ಜನರಿಗೆ ದೊರೆಯುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.” ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಬೈಪಾಸ್ ಪೂರ್ಣಗೊಂಡರೆ ಶಿವಮೊಗ್ಗ ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ

ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುವ ದೂರದ ಹಾಗೂ ಭಾರಿ ವಾಹನಗಳ ಸಂಚಾರವನ್ನು ನಗರದ ಹೊರಭಾಗದ ಮೂಲಕ ತಿರುಗಿಸಲು ಬೈಪಾಸ್ ರಸ್ತೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

  • ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ.
  • ಭಾರೀ ವಾಹನಗಳ ನಗರ ಪ್ರವೇಶದ ಒತ್ತಡ ಇಳಿಕೆಯಾಗಲಿದೆ.
  • ಪ್ರಯಾಣದ ಸಮಯ ಕಡಿಮೆಯಾಗಲಿದೆ.
  • ಪ್ರಮುಖ ವೃತ್ತಗಳು ಹಾಗೂ ನಗರ ರಸ್ತೆಗಳ ಮೇಲಿನ ಸಂಚಾರ ಒತ್ತಡ ಕಡಿಮೆಯಾಗಲಿದೆ.
  • ರಸ್ತೆ ಸುರಕ್ಷತೆ ಮತ್ತಷ್ಟು ಸುಧಾರಿಸಲಿದೆ.
  • ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಬಲಪಡಲಿದೆ.
  • ಮಲೆನಾಡಿನ ವ್ಯಾಪಾರ, ಕೈಗಾರಿಕೆ, ಕೃಷಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

Shivamogga, October 4: Lok Sabha member B.Y. Raghavendra announced that a total grant of ₹466.74 crore has been sanctioned for the construction of the remaining bypass road and the development of the National Highway within Shivamogga city limits.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *