
ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದರ ಪತ್ತೆಗೆ ಡ್ರೋಣ್ ಕ್ಯಾಮರಾ ಬಳಸುತ್ತಿರುವ ಪೊಲೀಸರು!
ಶಿವಮೊಗ್ಗ, ಜೂ. 8: ಡ್ರೋಣ್ ಕ್ಯಾಮರಾಗಳ ಮೂಲಕ ನಿರ್ಜನ ಪ್ರದೇಶಗಳಲ್ಲಿ ನಡೆಯುವ ಚಟುವಟಿಕೆ, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ಪತ್ತೆಗೆ ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ!
ತುಂಗಾ ನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ರಘುವೀರ್ ನೇತೃತ್ವದ ಪೊಲೀಸ್ ತಂಡವು, ಜೂ. 7 ರ ರಾತ್ರಿ ಠಾಣಾ ವ್ಯಾಪ್ತಿಯ ವಿವಿಧೆಡೆ ಡ್ರೋಣ್ ಕ್ಯಾಮರಾದ ಮೂಲಕ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರು ಹಾಗೂ ಅಸಭ್ಯ ವರ್ತನೆಯಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಿದೆ.

ಗೋಪಾಳ ಹಾಗೂ ಮಲ್ಲಿಗೇನಹಳ್ಳಿ ಸುತ್ತಮುತ್ತ ಈ ಕಾರ್ಯಾಚರಣೆ ನಡೆಸಿದೆ. ವಶಕ್ಕೆ ಪಡೆದ ವ್ಯಕ್ತಿಗಳ ಪೂರ್ವಾಪರ ಪರಿಶೀಲನೆ ನಡೆಸಿದೆ.12 ಲಘು ಪ್ರಕರಣಗಳ ಜೊತೆಗೆ 15 ಐಎಂವಿ, 1 ಕೋಟ್ಪಾ ಕೇಸ್ ದಾಖಲಿಸಿದೆ.
ಡ್ರೋಣ್ ಬಳಕೆ: ಗಸ್ತು ಕಾರ್ಯಾಚರಣೆ ವೇಳೆ ಪೊಲೀಸರು ಇತ್ತೀಚೆಗೆ ಡ್ರೋಣ್ ಕ್ಯಾಮರಾ ಬಳಕೆ ಮಾಡುತ್ತಿದ್ದಾರೆ. ತಾವಿರುವ ಸ್ಥಳದಿಂದಲೇ ಸುಮಾರು ಒಂದೆರೆಡು ಕಿಲೋ ಮೀಟರ್ ದೂರದವರೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿವೆ ಎಂಬುವುದರ ಮಾಹಿತಿಯನ್ನು ಡ್ರೋಣ್ ಕ್ಯಾಮರಾದ ಮೂಲಕ ಸುಲಭವಾಗಿ ಕಲೆ ಹಾಕುತ್ತಿದ್ದಾರೆ.
‘ಡ್ರೋಣ್ ಕ್ಯಾಮರಾದಿಂದ ನಿರ್ದಿಷ್ಟ ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಅನುಮಾನ ಕಂಡುಬಂದ ಸ್ಥಳಗಳಿಗೆ ತೆರಳಿ ಪರಿಶೀಲನೆ ಮಾಡಲು ಹಾಗೂ ಸಂಭಾವ್ಯ ಅಪರಾಧ ಕೃತ್ಯ ತಡೆಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳುತ್ತಾರೆ.
