‘ದಿಕ್ಕು ತಪ್ಪಿದ, ಮೌಲ್ಯಗಳನ್ನು ಮರೆತ ಪತ್ರಿಕೋದ್ಯಮ’ – ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು

ಶಿವಮೊಗ್ಗ, ಜು. 1: ‘ಪತ್ರಿಕೋದ್ಯಮ ಇಂದು ದಿಕ್ಕು ತಪ್ಪುತ್ತಿದೆ. ಮೌಲ್ಯಗಳನ್ನು ಮರೆತಿದೆ. ಕಾಸಿಗಾಗಿ ಸುದ್ದಿ, ಧರ್ಮಕ್ಕಾಗಿ ಸುದ್ದಿ, ರಾಜಕಾರಣಕ್ಕಾಗಿ ಸುದ್ದಿಗಳು ಸರಕಾಗಿ ಹೋಗಿವೆ. ದ್ವೇಷದ ಮತ್ತು ಸುಳ್ಳಿನ ಪತ್ರಿಕೋದ್ಯಮವು, ಮನುಷ್ಯತ್ವವನ್ನೇ ನುಂಗಿಹಾಕಿ ಸಮಾಜಕ್ಕೆ ಕೊಳ್ಳಿಯಿಡುವ ಕೆಲಸ ಮಾಡುತ್ತಿವೆ’ ಎಂದು ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯಿಂದ ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹಂಬಲದ ಪತ್ರಿಕೋದ್ಯಮ ಮರೆಯಾಗಿದೆ. ಪತ್ರಿಕೋದ್ಯಮವೇ ಒಂದು ಗ್ಲಾಮರ್ ಸ್ವರೂಪ ಪಡೆದುಕೊಂಡಿದೆ. ಯಾವುದೋ ಸಿದ್ಧಾಂತಗಳಿಗೆ, ಹಣಕ್ಕೆ ಒತ್ತು ಕೊಟ್ಟು, ಪತ್ರಿಕೋದ್ಯಮವನ್ನೇ ಹದಗೆಡುವಂತೆ ಮಾಡಲಾಗುತ್ತಿದೆ. ನಿಜ ಪತ್ರಿಕೋದ್ಯಮವೇ ಮಿಥ್ಯವಾಗುತ್ತಿದೆ. ಮಿಥ್ಯ ಪತ್ರಿಕೋದ್ಯಮವನ್ನೇ ಸತ್ಯವನ್ನಾಗಿಸಲು ಹೆಣಗಾಡಲಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು‌.

ಪತ್ರಕರ್ತ ಎಂದರೆ ಅವನೇನೂ ಆಕಾಶದಿಂದ ಉದುರಿದವನಲ್ಲ. ಈ ನೆಲದ ಸ್ಪರ್ಶ ಗುಣವನ್ನು ಅರಿತಾಗ ಮಾತ್ರ ಆತ ನಿಜವಾದ ಪತ್ರಕರ್ತನಾಗಲು ಸಾಧ್ಯ. ವ್ಯವಸ್ಥೆಯನ್ನು ಹಾಳುಮಾಡುವ ಸಾಮಾಜಿಕ ಜವಾಬ್ದಾರಿ ಮರೆತಿರುವ ಪತ್ರಿಕೋದ್ಯಮದಿಂದ ಈ ಸಮಾಜಕ್ಕೆ ದೊಡ್ಡ ಹಾನಿಯಾಗುವುದಂತೂ ನಿಜ. ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಮಾತನಾಡಿ, ಪತ್ರಕರ್ತ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರು ಮಾತನಾಡಿಪತ್ರಿಕೋದ್ಯಮ ಎಂಬುದು ಅಹಂಕಾರವಲ್ಲ. ಅದು ಸಮಾಜಕ್ಕೆ ಅಲಂಕಾರವಾಗಬೇಕು. ಮೌಲ್ಯಗಳು ಮರೆಯಾಗಬಾರದು ಎಂದರು.

ಸನ್ಮಾನ: ಸಮಾರಂಭದಲ್ಲಿ ಪ್ರಿಂಟರ್ ಹರೀಶ್, ಡಿಟಿಪಿ ಆಪರೇಟರ್ ಶೋಭಾ ಹಾಗೂ ಪತ್ರಿಕಾ ವಿತರಕ ಚಂದ್ರಶೇಖರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್,  ಟೆಲೆಕ್ಸ್ ರವಿಕುಮಾರ್,  ವೈದ್ಯ, ವಿ.ಟಿ.ಅರುಣ್, ಹಾಲಸ್ವಾಮಿ, ಕೆ.ಆರ್.ಸೋಮನಾಥ್, ಗಾ.ರಾ.ಶ್ರೀನಿವಾಸ್, ಹುಚ್ಚುರಾಯಪ್ಪ, ದೀಪಕ್  ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →