ರಕ್ಷಣಾ ಬೇಲಿಯಿಲ್ಲದ ಅಪಾಯಕಾರಿ ವಿದ್ಯುತ್ ಟ್ರಾನ್ಸ್​ಫಾರ್ಮಾರ್’ಗಳು : ಕಣ್ಮುಚ್ಚಿ ಕುಳಿತಿದೆಯೇ ಇಂಧನ ಇಲಾಖೆ?!

ಅಪಾಯಕಾರಿ ವಿದ್ಯುತ್ ಟ್ರಾನ್ಸ್ಫಾರ್ಮಾರ್’ಗಳು

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಜು. 6: ಬಹುತೇಕ ಕಡೆ ವಿದ್ಯುತ್ ಟ್ರಾನ್ಸ್​ಫಾರ್ಮಾರ್ (ಪರಿವರ್ತಕ) ಗಳ ಸುತ್ತಲು ರಕ್ಷಣಾ ಬೇಲಿ (ಫೆನ್ಸಿಂಗ್) ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಟ್ರಾನ್ಸ್​ಫಾರ್ಮರ್ ಗಳು ಜನ-ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ!

ಅದರಲ್ಲಿಯೂ ಮಳೆಗಾಲದ ವೇಳೆ ತಾಂತ್ರಿಕ ಸಮಸ್ಯೆ, ಅಸಮರ್ಪಕ ನಿರ್ವಹಣೆ ಮತ್ತೀತರ ಕಾರಣಗಳಿಂದ ಕೆಲ ಟ್ರಾನ್ಸ್​ಫಾರ್ಮಾರ್ ಗಳ ಸುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನಾಹುತಕಾರಿ ಘಟನೆಗಳು ಹೆಚ್ಚಾಗುತ್ತಿವೆ.

ಇದಕ್ಕೆ ತಾಜಾ ನಿದರ್ಶನವೊಂದು ಶಿವಮೊಗ್ಗದ ಆದರ್ಶ ನಗರದಲ್ಲಿ ಬುಧವಾರ ಸಂಜೆ ನಡೆದಿದೆ. ರಕ್ಷಣಾ ಬೇಲಿಯಿಲ್ಲದ ವಿದ್ಯುತ್ ಟ್ರಾನ್ಸ್​ಫಾರ್ಮಾರ್ ವೊಂದರ ಬಳಿ ಹಸಿರು ಮೇಯಲು ಹೋದ ಆಕಳುಗಳೆರೆಡು ವಿದ್ಯುತ್ ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟ ದುರಂತವೊಂದು ನಡೆದಿದೆ.

‘ಸದರಿ ಸ್ಥಳದ ಬಳಿಯೇ ಪ್ರತಿನಿತ್ಯ ಸುತ್ತಮುತ್ತಲಿನ ಬಡಾವಣೆಯ ಮಕ್ಕಳು ಕ್ರಿಕೆಟ್ ಆಟವಾಡುತ್ತಾರೆ. ಮಳೆಯಿದ್ದ ಕಾರಣದಿಂದ ಆಟವಾಡಲು ಯಾರು ಬಂದಿಲ್ಲ. ಒಂದು ವೇಳೆ ಮಕ್ಕಳೇನಾದರೂ ಆಟವಾಡಲು ಬಂದಿದ್ದರೆ, ದೊಡ್ಡ ಅನಾಹುತವೊಂದು ಸಂಭವಿಸುತ್ತಿತ್ತು’ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ಗಂಭೀರ ನಿರ್ಲಕ್ಷ್ಯ: ಟ್ರಾನ್ಸ್​ಫಾರ್ಮಾರ್ ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷತಾ ಬೇಲಿ (ಫೆನ್ಸಿಂಗ್) ಅಳವಡಿಸುವುದು ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ಯಾವುದೇ ಟ್ರಾನ್ಸ್​ಫಾರ್ಮಾರ್ ಗಳ ಬಳಿ ಫೆನ್ಸಿಂಗ್ ಗಳ ವ್ಯವಸ್ಥೆಯೇ ಇಲ್ಲವಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಬಡಾವಣೆ ಅಭಿವೃದ್ದಿ ಪಡಿಸುವ ವೇಳೆಯಲ್ಲಿಯೇ, ಟ್ರಾನ್ಸ್​ಫಾರ್ಮಾರ್ ಗಳ ಸುತ್ತ ಫೆನ್ಸಿಂಗ್ ಅಳವಡಿಕೆಯಾದ ನಂತರ ಹಸ್ತಾಂತರ ಮಾಡಿಕೊಳ್ಳಲು ಅನುಮತಿ ನೀಡಬೇಕು. ಆದರೆ ಇವ್ಯಾವ ವ್ಯವಸ್ಥೆಯಾಗದಿದ್ದರೂ ವಿದ್ಯುತ್ ಸಂಸ್ಥೆಗಳು ಸದರಿ ಬಡಾವಣೆಗಳ ಹಸ್ತಾಂತರಕ್ಕೆ ಅನುಮತಿ ನೀಡುತ್ತಿವೆ. ಇದಕ್ಕೆ ಹಣದ ವ್ಯವಹಾರ ಮುಖ್ಯವಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದೊಂದು ದೊಡ್ಡ ಪ್ರಮಾದವಾಗಿದೆ.

ಎಚ್ಚೆತ್ತುಕೊಳ್ಳಲಿ: ಇನ್ನಾದರೂ ಇಂಧನ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕಡ್ಡಾಯವಾಗಿ ಟ್ರಾನ್ಸ್​ಫಾರ್ಮಾರ್ ಗಳ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡುವ ವ್ಯವಸ್ಥೆ ಮಾಡಬೇಕು. ರಕ್ಷಣಾ ಬೇಲಿಯಿಲ್ಲದ ಟ್ರಾನ್ಸ್​ಫಾರ್ಮಾರ್ ಗಳ ಪಟ್ಟಿ ಸಿದ್ದಪಡಿಸಿ, ಕಾಲಮಿತಿಯೊಳಗೆ ರಕ್ಷಣಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಲಿದೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *