‘ಭಾರತೀಯ ಪರಂಪರೆಯು ವಿಶ್ವದ ಶ್ರೇಷ್ಠ ಪರಂಪರೆ’ – ರಂಗಕರ್ಮಿ, ನಟ ಟಿ.ಎಸ್.ನಾಗಾಭರಣ 

ಶಿವಮೊಗ್ಗ, ಫೆ.8: ಭಾರತೀಯ ಪರಂಪರೆಯು ವಿಶ್ವದ ಶ್ರೇಷ್ಠ ಪರಂಪರೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವವೇ ಒಪ್ಪಿಕೊಳ್ಳುತ್ತಿದೆ ಎಂದು ರಂಗಕರ್ಮಿ, ನಟ ಟಿ.ಎಸ್.ನಾಗಾಭರಣ ಹೇಳಿದರು.
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಗರದ ನಗರಸಭೆ ಆವರಣದ ಮಾರಿಕಾಂಬ ಕಲಾವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪರಂಪರೆಯನ್ನು ಕೀಳಾಗಿ ಕಾಣುವ ಮನೋಭಾವವನ್ನು ಮೆಕಾಲೆ ಶಿಕ್ಷಣ ಪದ್ಧತಿ ಎಲ್ಲರಲ್ಲಿಯೂ ಮೂಡಿಸುತ್ತಿತ್ತು. ಭಾರತೀಯ ವಿಷಯ ಹಾಗೂ ವಿಚಾರಧಾರೆ ಎಂದರೆ ಅದೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಚಿಂತನೆ ಬೆಳೆದುಬಿಟ್ಟಿತ್ತು. ಪ್ರಸ್ತುತ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವಾದ್ಯಂತ ಒಪ್ಪಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇಡೀ ಜಗತ್ತಿಗೆ ವಿಶ್ವಮಾನವ ತತ್ವವನ್ನು ಸಾರಿದ್ದು ಕನ್ನಡಿಗರು. ಆದಿಕವಿ ಪಂಪನಿಂದ ಇವತ್ತಿನವರೆಗೂ ಎಲ್ಲರೂ ವಿಶ್ವಮಾನವ ಸಂದೇಶಗಳನ್ನು ಸಾರಿದರು. ಭಾರತ ದೇಶ ವಿಶ್ವಗುರು ಆಗುವ ದಿಸೆಯಲ್ಲಿ ಭಾರತೀಯ ಪರಂಪರೆ ಹಾಗೂ ಶ್ರದ್ಧೆಯ ಕೇಂದ್ರಗಳಲ್ಲಿನ ಆಚರಣೆಯು ಬಹುಮುಖ್ಯ ಕಾರಣ ಎಂದರು.
ಧಾರ್ಮಿಕ ಶ್ರದ್ಧಾಕೇಂದ್ರಗಳ ಸುತ್ತ ಸಮುದಾಯಗಳ ಒಳಗೊಳ್ಳುವಿಕೆ ಸಾಧಿಸುವುದನ್ನು ಭಾರತೀಯ ಪರಂಪರೆ ನಮಗೆಲ್ಲರಿಗೂ ಉತ್ತಮವಾಗಿ ಕಲಿಸಿಕೊಟ್ಟಿದೆ. ವ್ಯಕ್ತಿನಿಷ್ಠ, ಆತ್ಮಸಂವೇದನೆ ಇದ್ದರೆ ಸಮಾಜಮುಖಿ ಚಿಂತನೆ ಉಂಟುಮಾಡಬಹುದು. ಸಮಷ್ಠಿಗೆ ಬೇಕಾದ ಆಲೋಚನೆ ಮೂಡಿಸುವುದು. ಇಡೀ ಸಮಾಜವನ್ನು ಜೀವನ್ಮುಖಿಯಾಗಿಸುವುದು ಜಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಂಸ್ಕೃತಿಯ ಅನ್ವರ್ಥ ನಾಮ ಸಾಗರ. ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ, ಪ್ರಾಕೃತಿಕವಾಗಿಯೂ ಸಾಗರ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಸಾಂಸ್ಕೃತಿಕ ವೇದಿಕೆಗಳ ಮುಖಾಂತರ ಸ್ಥಳೀಯ ಯುವ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಅತ್ಯದ್ಭುತ ವೇದಿಕೆಯಾಗಿ ಮಾರ್ಪಾಡಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಸಾಗರ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರುಗುತ್ತಿದ್ದು, ಸಾಂಸ್ಕೃತಿಕ ವೇದಿಕೆ ಮುಖಾಂತರ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಅಭಿನಂದನೀಯ. ವ್ಯಾಪಕವಾಗಿ ಸಾವಿರಾರು ಭಕ್ತರು ಸಾಗರ ಜಾತ್ರೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಸಾಗರದ ಮಾರಿಕಾಂಬ ಜಾತ್ರೆಯು ಪ್ರಮುಖ. ಶಿರಸಿ ಜಾತ್ರೆಯ ಹೊರತುಪಡಿಸಿ ಅದ್ಧೂರಿಯಾಗಿ ವೈಭವಯುತವಾಗಿ ಮಾರಿಕಾಂಬ ಜಾತ್ರೆ ನಡೆಯುವುದು ಸಾಗರದಲ್ಲಿ. ಧಾರ್ಮಿಕ ಶಕ್ತಿ ಕೇಂದ್ರ ಎಂದು ಹೇಳಿದರು.
ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್, ಉಪಾಧ್ಯಕ್ಷ ವಿ.ಶಂಕರ್, ಸಹ ಕಾರ್ಯದರ್ಶಿ ಆನಂದ್, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಪ್ರಮುಖರಾದ ಲಲಿತಮ್ಮ, ಭಾವನಾ ಸಂತೋಷ್, ವಿ.ಮಹೇಶ್, ತುಕಾರಾಂ ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾ ಮಾಡಲು ಸ್ಕ್ರಿಪ್ಟ್‌
ಕೆಳದಿ ಶಿವಪ್ಪನಾಯಕನ ಕುರಿತು ನಾಲ್ಕು ವರ್ಷಗಳ ಅಧ್ಯಯನ ನಡೆಸಿ ಸಿನಿಮಾ ಮಾಡಲು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆಳದಿ ಶಿವಪ್ಪನಾಯಕನ ಕುರಿತ ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆಯಿದೆ. ಕೆಳದಿ ಚೆನ್ನಮ್ಮನ 25 ವರ್ಷಗಳ ಆಡಳಿತ ಇಂದಿಗೂ ಸ್ಫೂರ್ತಿದಾಯಕ.
| ಟಿ.ಎಸ್.ನಾಗಾಭರಣ, ರಂಗಕರ್ಮಿ

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →