ಅನುಮಾನಾಸ್ಪದ ಬಾಕ್ಸ್ ಗಳಲ್ಲಿ ಇದ್ದಿದ್ದು ಅಡುಗೆ ಉಪ್ಪು, ರದ್ದಿ ವಸ್ತುಗಳು..!

ಶಿವಮೊಗ್ಗ, ನ. 6: ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಎರಡು ಅಲ್ಯೂಮಿನಿಯಂ ಬಾಕ್ಸ್ ಗಳ ಒಳಗೆ ಉಪ್ಪು ಹಾಗೂ ರದ್ದಿ ವಸ್ತುಗಳಿರುವುದು ಪತ್ತೆಯಾಗಿದೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.

ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ವ್ಯಾಟ್ಸಾಪ್ ನಲ್ಲಿ ಮಾಹಿತಿ ನೀಡಿದ್ದಾರೆ.

‘ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್ ಗಳನ್ನುತೆರೆದು ಪರಿಶೀಲಿಸಿದ್ದು, ಈ ವೇಳೆ ಅದರೊಳಗೆ ಯಾವುದೇ ಸ್ಫೋಟಕ ವಸ್ತುಗಳಿರಲಿಲ್ಲ. ವೇಸ್ಟ್ (ರದ್ದಿ) ವಸ್ತುಗಳು, ಅಡುಗೆ ಉಪ್ಪು ಇರುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಭಾನುವಾರ ಬೆಳಿಗ್ಗೆ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ಕಾಂಪೌಂಡ್ ಬಳಿ ಗೋಣಿ ಚೀಲದಲ್ಲಿ ಹೊಲಿಗೆ ಹಾಕಿ ಮುಚ್ಚಿದ್ದ ಎರಡು ಅಲ್ಯೂಮಿನಿಯಂ ಪೆಟ್ಟೆಗೆಗಳು ಪತ್ತೆಯಾಗಿದ್ದವು. ಇವುಗಳನ್ನು ಗಮನಿಸಿದ ಸಾರ್ವಜನಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರೈಲ್ವೆ ಪೊಲೀಸರು ಜಯನಗರ ಠಾಣೆಗೆ ಸಂದೇಶ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಮೂಲಕ ತಪಾಸಣೆ ನಡೆಸಿದ್ದರು. ಆದರೆ ಬಾಕ್ಸ್ ಗಳಿಗೆ ಲಾಕ್ ಹಾಕಿದ್ದ ಕಾರಣದಿಂದ ಒಳಗಡೆ ಏನಿದೆ ಎಂಬುವುದು ಪತ್ತೆಯಾಗಿರಲಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ಸ್ಥಳದ ಸುತ್ತಮುತ್ತ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆಯ ಕೋರಿಕೆಯಂತೆ ಬೆಂಗಳೂರಿನಿಂದ ಬಾಂಬ್ ಪತ್ತೆ, ನಿಷ್ಕ್ರೀಯಗೊಳಿಸುವ ತಂಡ ಭಾನುವಾರ ಸಂಜೆ ಆಗಮಿಸಿತ್ತು.

ಸುರಿಯುವ ಮಳೆಯಲ್ಲಿಯೇ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದ ಸದರಿ ತಂಡವು, ಬಾಕ್ಸ್ ಗಳನ್ನು ಸ್ಪೋಟಿಸಿ ಅವುಗಳನ್ನು ತೆರೆದಿತ್ತು. ಒಳಗಡೆ ರದ್ದಿ ವಸ್ತುಗಳು ಹಾಗೂ ಉಪ್ಪು ಇರುವುದು ಬೆಳಕಿಗೆ ಬಂದಿತ್ತು.  

ಇಬ್ಬರು ವಶಕ್ಕೆ : ನಿಗೂಢವಾದ ಕಾರಣ?

*** ಆಗುಂತಕರು ಕಾರಿನಲ್ಲಿ ಆಗಮಿಸಿ ಬಾಕ್ಸ್ ಗಳನಿಟ್ಟು ತೆರಳಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಪೊಲೀಸರು ಸಿಸಿ ಕ್ಯಾಮರಾ ದೃಶ‍್ಯಾವಳಿಗಳ ಆಧಾರದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ಬಾಕ್ಸ್ ಗಳನಿಟ್ಟಿದ್ದು ಏಕೆ? ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *