ವಿಶೇಷ ಲೇಖನ : ಡಾ. ಶಿವಯೋಗಿ ಯಲಿ, ಉಪ ನಿರ್ದೇಶಕರು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ ಜಿಲ್ಲೆ.
ಚರ್ಮಗಂಟು ರೋಗವು ದನಗಳು ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಕಾಯಿಲೆಯಾಗಿದೆ. ಪಾಕ್ಸ್ ವೈರಿಡೆ ಕುಟುಂಬಕ್ಕೆ ಸೇರಿದ ಕ್ಯಾಪ್ರಿಪಾಕ್ಸ್ ವೈರಸ್ ಕುಲದ ವೈರಸ್ ಗಳಿಂದ ಈ ಕಾಯಿಲೆ ಉಂಟಾಗುತ್ತದೆ .
ಮುಖ್ಯಾಂಶಗಳು :–
೧) ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ.
೨) ರೋಗದ ಪ್ರಮುಖ ಲಕ್ಷಣವೆಂದರೆ ಚರ್ಮದಲ್ಲಿ ಗಂಟುಗಳು ಉಂಟಾಗುವುದು.
೩)ಇದು ಪ್ರಾಣಿಜನ್ಯ ರೋಗವಲ್ಲ ಮನುಷ್ಯರಿಗೆ ಈ ರೋಗವು ಹರಡುವುದಿಲ್ಲ.
೪)ಸೋಂಕಿತ ರಾಸುಗಳ ಹಾಲನ್ನು ಪ್ಯಾಶ್ಚರೀಕರಿಸಿ/ ಕಾಯಿಸಿ ಬಳಸಬಹುದು.
೫)ಈ ರೋಗವು ಪ್ರಮುಖವಾಗಿ ಸಂದೀಪದಿ ಕೀಟಗಳು, ಸೊಳ್ಳೆಗಳು ಉಣ್ಣೆಗಳು ,ಮತ್ತು ಕಚ್ಚುವ ನೊಣಗಳಿಂದ ಹರಡುತ್ತವೆ.
೬)ಸೋಂಕಿತ ಜಾನುವಾರುಗಳ ಸಾಗಾಣಿಕೆಯಿಂದ ಸೋಂಕು ಹರಡುಬಹುದಾಗಿದೆ ನೀರು ಮತ್ತು ಆಹಾರದ ಮೂಲಕವೂ ಈ ರೋಗ ಹರಡುತ್ತದೆ.
ರೋಗಲಕ್ಷಣಗಳು :-
ಹೈನುರಾಸುಗಳಲ್ಲಿ ಹಾಲಿನ ಇಳುವರಿಯಲ್ಲಿಇಳಿಕೆ ಕಂಡುಬರುತ್ತದೆ. ತೀವ್ರ ಸ್ವರೂಪದ ಜ್ವರ ಕಾಣಿಸಿಕೊಳ್ಳುತ್ತದೆ. ದೇಹದ ಬಹುತೇಕ ಭಾಗಗಳಲ್ಲಿ ಒಂದರಿಂದ ಐದು ಸೆಂಟಿಮೀಟರ್ ಗಾತ್ರದ ಚರ್ಮದ ಗಂಟುಗಳು ಉಂಟಾಗುತ್ತವೆ. ಕೀಲುಗಳ ಬಾವು ಮತ್ತು ಊತದಿಂದಾಗಿ ರೋಗ ಪೀಡಿತ ರಾಸುಗಳು ಮಲಗಲು ಸಾಧ್ಯವಾಗುವುದಿಲ್ಲ. ಚರ್ಮದ ಗಂಟುಗಳು ಹಲವಾರು ತಿಂಗಳುಗಳವರೆಗೆ ಇರುತ್ತದೆ.
ಗರ್ಭ ಧರಿಸಿದ ರಾಸುಗಳಲ್ಲಿ ಗರ್ಭಪಾತವಾಗಬಹುದು. ತೀವ್ರವಾದ ಸೋಂಕು ಇರುವ ಜಾನುವಾರುಗಳು ನಿಮೋನಿಯಾ ಕೆಚ್ಚಲುಬಾವು, ಕೊಳೆತ ಚರ್ಮದ ಗಾಯಗಳಿಂದಾಗಿ ಜಾನುವಾರುಗಳ ಚೇತರಿಕೆ ನಿಧಾನವಾಗಬಹುದು. ಸಾವು ಕೂಡ ಸಂಭವಿಸಬಹುದು. ಪಶುವೈದ್ಯರ ಮೇಲ್ವಿಚಾರಣೆಯೊಂದಿಗೆ, ರೋಗ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗಿರುತ್ತದೆ .
ರೋಗ ನಿಯಂತ್ರಣ ಕ್ರಮಗಳು :-
ಆರೋಗ್ಯವಂತ ರಾಸುಗಳಿಗೆ ರೋಗನಿರೋಧಕ ಲಸಿಕೆ ಹಾಕಿಸುವುದು. ಆರೋಗ್ಯವಂತ ಪ್ರಾಣಿಗಳಿಂದ ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸಬೇಕು. ಪರ ಊರುಗಳಿಂದ ಪ್ರಾಣಿಗಳ ಸಾಗಾಣಿಕೆ ಮೇಲೆ ನಿರ್ಬಂಧ ಹಾಕಬೇಕು. ಜಾನುವಾರು ಮಾರುಕಟ್ಟೆ/ ಜಾನುವಾರು ಜಾತ್ರೆಗಳನ್ನು ನಿಷೇಧಿಸಬೇಕು. ಹಿಂಡು ಹಿಂಡಾಗಿ ಜಾನುವಾರುಗಳು ಮೇಯುವುದನ್ನು ತಪ್ಪಿಸಬೇಕು. ನೊಣ ,ಸೊಳ್ಳೆ , ಉಣ್ಣೆ ಮತ್ತು ಕೀಟಗಳನ್ನು ನಿಯಂತ್ರಿಸುವುದು ಹಾಗೂ ಕಚ್ಚದಂತೆ ಮುಂಜಾಗ್ರತೆ ವಹಿಸಬೇಕು. ಸೊಳ್ಳೆ ಪರದೆ ಇಲ್ಲವೇ ಕೀಟ ಬಲೆಗಳನ್ನು ಬಳಕೆ ಮಾಡಬೇಕು, ಕೊಟ್ಟಿಗೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಣ ಔಷಧಿಗಳನ್ನು ಸಿಂಪಡಿಸಬೇಕು.
ಚರ್ಮಗಂಟು ರೋಗ ಲಸಿಕೆ ಅಭಿಯಾನ
ದಿನಾಂಕ 20/ 6/2024 ರಿಂದ 20/ 7/ 2024ರ ವರೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಮತ್ತು ಕುರಿ, ಮೇಕೆ ಗಳಿಗೆ ಕರುಳು ಬೇನೆ ಲಸಿಕೆ ಹಾಕುವ ಅಭಿಯಾನವನ್ನು ಏರ್ಪಡಿಸಲಾಗಿದೆ. ತಮ್ಮ ಜಾನುವಾರುಗಳಿಗೆ ಚರ್ಮಗಂಟು ರೋಗ ಮತ್ತು ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ರೋಗದ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಈ ಮೂಲಕ ವಿನಂತಿಸಲಾಗಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು,ಲಸಿಕೆ ದಾರರು ತಮ್ಮ ಮನೆ ಬಾಗಿಲಿಗೇ ಬಂದಾಗ ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಕೊಳ್ಳಬೇಕೆಂದು ಮತ್ತೊಮ್ಮೆ ರೈತ.ಬಾಂಧವರಲ್ಲಿ ವಿನಂತಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿರುವ ನಿಮ್ಮ ಹತ್ತಿರದ ಪಶು ವೈದ್ಯ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಶಿವಯೋಗಿ ಯಲಿ ಅವರು ತಿಳಿಸಿದ್ದಾರೆ.

