ಶಿವಮೊಗ್ಗ, ಮಾ. 8: ಹೋಳಿ ಹಬ್ಬ ಆಚರಣೆ ವೇಳೆ ಕರ್ಕಶ ಶಬ್ದ ಹೊರಹೊಮ್ಮುವ ಸೈಲೆನ್ಸರ್ ಅಳವಡಿಸಿಕೊಂಡು, ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 10 ಬೈಕ್ ಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು, ಸವಾರರಿಗೆ ದಂಡ ವಿಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದಿದೆ.

ಟ್ರಾಫಿಕ್ ಠಾಣೆ ಇನ್ಸ್’ಪೆಕ್ಟರ್ ಜಯಶ್ರೀ ಎಸ್ ಮಾನೆ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರಿ ಠಾಣೆಗಳ ಪೊಲೀಸರು ನಗರದ ವಿವಿಧೆಡೆ ಈ ಕಾರ್ಯಾಚರಣೆ ನಡೆಸಿದ್ದಾರೆ.
ಬೈಕ್ ಗಳ ಸೈಲೆನ್ಸರ್ ಮಾರ್ಪಡಿಸಿಕೊಂಡು, ಕರ್ಕಶ ಶಬ್ದ ಉಂಟು ಮಾಡುವ ಬೈಕ್ ಸವಾರರನ್ನು ಪತ್ತೆ ಹಚ್ಚಿ ಅವರು ಚಲಾಯಿಸುತ್ತಿದ್ದ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಚಾಲಕರ ವಿರುದ್ದ ಕೇಸ್ ದಾಖಲಿಸಿಕೊಂಡು, ದಂಡ ವಿಧಿಸಿದ್ದಾರೆ. ಜೊತೆಗೆ ದೋಷಪೂರಿತ ಸೈಲೆನ್ಸರ್ ಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

