
shimoga | ಶಿವಮೊಗ್ಗದಲ್ಲಿ ಗೊಂದಲ ಸೃಷ್ಟಿಸಿದ ನೂತನ ‘ಇ-ಆಸ್ತಿ’ ವ್ಯವಸ್ಥೆ : ಗಮನಹರಿಸುವುದೆ ಪಾಲಿಕೆ ಆಡಳಿತ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅ. 7: ರಾಜ್ಯದ ಎಲ್ಲ ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ, ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ಕಳೆದ ಅಕ್ಟೋಬರ್ 7 ರಿಂದ ಇ – ಆಸ್ತಿ ವ್ಯವಸ್ಥೆ ಅಳವಡಿಸಿಕೊಂಡಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ, ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ, ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿ ನೊಂದಣಿಗೆ ಪಾಲಿಕೆಯ ಇ – ಆಸ್ತಿ ಹೊಂದಿರುವುದು ಕಡ್ಡಾಯವಾಗಿದೆ.
ಇದರಿಂದ ಕಳೆದ ಕೆಲ ದಿನಗಳಿಂದ ಇ – ಆಸ್ತಿ ಮಾಡಿಸಲು, ನಾಗರೀಕರು ಮಹಾನಗರ ಪಾಲಿಕೆ ಕಚೇರಿಗೆ ಎಡತಾಕುತ್ತಿದ್ದಾರೆ. ಕಂದಾಯ ವಿಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನ ಸಾಗರವೇ ಕಂಡುಬರುತ್ತಿದೆ. ಆದರೆ ನೂತನ ವ್ಯವಸ್ಥೆಯ ಬಗ್ಗೆ ಸಾಕಷ್ಟು ನಾಗರೀಕರಿಗೆ ಸಮರ್ಪಕ ಮಾಹಿತಿಯಿಲ್ಲವಾಗಿದೆ.
ಇದರಿಂದ ಸ್ಥಿರಾಸ್ತಿಗಳ ಮಾರಾಟ, ಖರೀದಿ ಪ್ರಕ್ರಿಯೆ ಅಸ್ತವ್ಯಸ್ತವಾಗುವಂತಾಗಿದೆ. ಪಾಲಿಕೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಕೆಲ ನಾಗರೀಕರು ನಿತ್ಯ ಅಲೆದಾಡುವಂತಾಗಿದೆ. ನಾನಾ ರೀತಿಯ ತೊಂದರೆ ಎದುರಿಸುತ್ತಿರುವುದು ಕಂಡುಬರುತ್ತಿದೆ.
‘ಇ – ಆಸ್ತಿ ಮಾಡಿಸಲು ಸ್ಥಿರಾಸ್ತಿಯ ಸಮಗ್ರ ದಾಖಲಾತಿಗಳನ್ನು ಪಾಲಿಕೆ ಆಡಳಿತಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ನಗರದ ಕೆಲ ಪ್ರದೇಶಗಳಲ್ಲಿನ, ಸ್ಥಿರಾಸ್ತಿಗಳ ಮಾಲೀಕರ ಬಳಿ ಮೂಲ ದಾಖಲಾತಿಗಳೇ ಇಲ್ಲವಾಗಿದೆ. ಸ್ಥಿರಾಸ್ತಿಯ ಪಾಲಿಕೆ ಖಾತೆ ಹೊರತುಪಡಿಸಿದರೆ, ಇತರೆ ದಾಖಲಾತಿಗಳಿಲ್ಲ.
ಸ್ಥಿರಾಸ್ತಿಯ ಮೂಲ ದಾಖಲೆ ಎಲ್ಲಿಂದ ತರುವುದು? ತಲಾತಲಾಂತರದಿಂದ ಬಂದ ಸ್ವತ್ತಾಗಿದೆ. ಇಂತಹ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ, ಸೂಕ್ತ ಪರಿಹಾರ ಕ್ರಮಕೈಗೊಳ್ಳಬೇಕಾಗಿದೆ. ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಬೇಕಾಗಿದೆ’ ಎಂದು ಕೆಲ ಸ್ಥಿರಾಸ್ತಿ ಮಾಲೀಕರು ಆಗ್ರಹಿಸುತ್ತಾರೆ.
ಗಮನಹರಿಸಲಿ : ಈ ಹಿಂದೆ ಶಿವಮೊಗ್ಗ ನಗರದಲ್ಲಿ ಯುಪಿಓಆರ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆಯಲಾಗಿತ್ತು. ಸ್ಥಿರಾಸ್ತಿ ಮಾಲೀಕರು ಪ್ರಾಪರ್ಟಿ ಕಾರ್ಡ್ ಮಾಡಿಸುವುದು ಕಡ್ಡಾಯವಾಗಿತ್ತು. ಇಲ್ಲದಿದ್ದರೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸ್ಥಿರಾಸ್ತಿ ನೊಂದಣಿಯಾಗುತ್ತಿರಲಿಲ್ಲ.
ತದನಂತರ ರಾಜ್ಯ ಸರ್ಕಾರವು, ಸ್ಥಿರಾಸ್ತಿಗಳ ನೊಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆದೇಶ ರದ್ದುಗೊಳಿಸಿತ್ತು. ಇದೀಗ ಇದೇ ಮಾದರಿಯ ಇ – ಆಸ್ತಿ ವ್ಯವಸ್ಥೆಯನ್ನು ಪಾಲಿಕೆ ಆಡಳಿತದಲ್ಲಿ ಕಾರ್ಯಗತಗೊಳಿಸಲಾಗಿದೆ. ಪ್ರಾರಂಭದ ಹಂತದಲ್ಲಿ ಸಾಕಷ್ಟು ಗೊಂದಲ, ಗಡಿಬಿಡಿಗಳು ಕಂಡುಬರುತ್ತಿವೆ.
ಈ ಕುರಿತಂತೆ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ನಾಗರೀಕರಿಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕಾಗಿದೆ. ತ್ವರಿತಗತಿಯಲ್ಲಿ ಇ – ಆಸ್ತಿ ನೀಡಬೇಕಾಗಿದೆ. ಕಂದಾಯ ವಿಭಾಗದ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಬೇಕಾಗಿದೆ. ಹಾಗೆಯೇ ರಾಜ್ಯ ಸರ್ಕಾರ ಕೂಡ ಇ – ಆಸ್ತಿ ವ್ಯವಸ್ಥೆಯಲ್ಲಿನ ಗೊಂದಲ ಸರಿಪಡಿಸಲು ಮುಂದಾಗಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.