
shimoga | ಶಿವಮೊಗ್ಗ – ಬಿಸಿಯೂಟ ಯೋಜನೆ ನೌಕರರ ಬೃಹತ್ ಪ್ರತಿಭಟನೆ!
ಶಿವಮೊಗ್ಗ (shivamogga), ಡಿ. 19: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿ, ಕರ್ನಾಕಟ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವು, ಡಿ. 19 ರ ಗುರುವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಗೊಂಡು, 24 ವರ್ಷಗಳು ಕಳೆಯುತ್ತಿವೆ. ಅತ್ಯಂತ ಮಹತ್ವದ ಯೋಜನೆಯಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಬಜೆಟ್ ನಲ್ಲಿ ಯೋಜನೆಗೆ ಮೀಸಲಿರಿಸುವ ಅನುದಾನ ಕಡಿಮೆ ಮಾಡಿಕೊಂಡು ಬರಲಾಗುತ್ತಿದೆ. ನೌಕರರಿಗೆ ನ್ಯಾಯಬದ್ಧ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ, ಇಡುಗಂಟು ಸೌಲಭ್ಯವನ್ನು ಸೇವೆ ಆಧಾರಿತವಾಗಿ ನೀಡಲು ಹಣಕಾಸು ಇಲಾಖೆ ಶಿಫಾರಸ್ಸು ಮಾಡಿದೆ. ಆದರೆ ಇಲ್ಲಿಯವರೆಗೂ ಜಾರಿಯಾಗಿಲ್ಲ. ತಕ್ಷಣ ಸದರಿ ಸೌಲಭ್ಯ ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬಿಸಿಯೂಟ ಯೋಜನೆಗಳನ್ನು ವಿಫಲಗೊಳಿಸುವ ಕಾರ್ಯಗಳು ನಡೆಯುತ್ತಿವೆ. ಇಸ್ಕಾನ್ ಮತ್ತೀತರ ಧರ್ಮಾಧಾರಿತ ಕೆಲ ಸಂಘಸಂಸ್ಥೆಗಳಿಗೆ ಯೋಜನೆ ಹಸ್ತಾಂತರ ಮಾಡಲು, ಕೆಲ ಜಿಲ್ಲೆಗಳಲ್ಲಿ ಆಗಾಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಇದು ನಿಜಕ್ಕೂ ಖಂಡನಾರ್ಹವಾದುದಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸುತ್ತೋಲೆಯಲ್ಲಿ 4 ಗಂಟೆ ಕೆಲಸ ಎಂದು ನಮೂದಿಸಲಾಗಿದೆ. ಆದರೆ 6 ಗಂಟೆಗೂ ಹೆಚ್ಚು ಕಾಲ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೈಪಿಡಿಯಲ್ಲಿ ಅವಧಿ ಪರಷ್ಕರಿಸಬೇಕು. ಬಿಸಿಯೂಟ ಯೋಜನೆ ಕಾಯಂಗೊಳಿಸಬೇಕು. ನೌಕರರನ್ನು ಶಾಲಾ ಸಿಬ್ಬಂದಿಗಳೆಂದು ಪರಿಗಣಿಸಬೇಕು.
ಬೇಸಿಗೆ ಹಾಗೂ ದಸರಾ ರಜೆಗಳ ವೇತನ ನೀಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ತಯಾರಕರನ್ನು ನೇಮಿಸಬೇಕು. ಮೃತ ಹೊಂದಿದ ನೌಕರರ ಕುಟುಂಬದವರಿಗೆ, ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರಾದ ಜಿ ಹನುಮಕ್ಕ, ಪ್ರಧಾನ ಕಾರ್ಯದರ್ಶಿ ಸ್ಮಿತಾ, ಖಜಾಂಚಿ ಸೂರ್ಯಕಲಾ, ಶಿಕಾರಿಪುರದ ಜಯಮ್ಮ, ಪಾರ್ವತಮ್ಮ, ಮೀನಾಕ್ಷಮ್ಮ, ಸೊರಬದ ಗೀತಾ, ಶಿವಮೊಗ್ಗದ ಚಂದ್ರಮ್ಮ, ಅಶ್ವಿನಿ, ತಾರ, ಪುಷ್ಪ, ಸಿಐಟಿಯು ಸಂಘಟನೆಯ ನಾರಾಯಣ, ಯಲ್ಲಪ್ಪ, ಮುನಿರಾಜು ಮೊದಲಾದವರಿದ್ದರು.
The Karnakata State Akshara Dasoha Employees Union (CITU) staged a massive protest at the DC office premises in Shimoga city on Thursday, December 19, demanding the central and state governments to fulfill various demands, including wage hike. A letter of appeal was submitted to the state government through the district administration.