ಶಿವಮೊಗ್ಗ (shivamogga), ಫೆಬ್ರವರಿ 17: ಶಿವಮೊಗ್ಗದ ಆದರ್ಶ ನಗರಕ್ಕೆ ಫೆಬ್ರವರಿ 17 ರಂದು ಶಾಸಕ ಚನ್ನಬಸಪ್ಪ ಅವರು ಪಾಲಿಕೆ ಹಾಗೂ ಜಲ ಮಂಡಳಿ ಅಧಿಕಾರಿಗಳೊಂದಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಸಂತೋಷ್ ಅವರ ನಿವಾಸದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಶಾಸಕರು ಭಾಗವಹಿಸಿ, ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿದರು.
ಆದರ್ಶ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಉಮೇಶ್ ಹಿರೇಮಠ ಅವರು ಮಾತನಾಡಿದರು. ಬಡಾವಣೆಯಲ್ಲಿ ಕುಡಿಯುವ ನೀರು ಪೂರೈಕೆ, ರಸ್ತೆ ದುರಸ್ತಿ, ಪಾರ್ಕ್ ಗಳ ಅಭಿವೃದ್ದಿ, ಬೀದಿ ದೀಪ ಸಮಸ್ಯೆ, ಸಮುದಾಯ ಭವನ ನಿರ್ಮಾಣ, ನಾಮಫಲಕ ಅಳವಡಿಕೆ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು.
ಮನವಿ ಆಲಿಸಿದ ನಂತರ ಶಾಸಕ ಚನ್ನಬಸಪ್ಪ ಅವರು ಮಾತನಾಡಿ, ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಶೀಘ್ರದಲ್ಲಿಯೇ ಬಡಾವಣೆಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಎರಡು ಪಾರ್ಕ್ ಗಳ ಅಭಿವೃದ್ದಿಗೊಳಿಸಲಾಗುವುದು. ಬೀದಿ ದೀಪ ಸಮಸ್ಯೆ, ಹೈಮಾಸ್ಟ್ ವಿದ್ಯುತ್ ಲೈಟ್ ಅಳವಡಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಿವಾಸಿಗಳು ಮುಂದಿಟ್ಟಿರುವ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕು. ಯಾವುದೇ ಕಾರಣಕ್ಕೂ ನೆಪ ಹೇಳಬಾರದು ಎಂದು ಸಭೆಯಲ್ಲಿ ಭಾಗಿಯಾಗಿದ್ದ ಪಾಲಿಕೆ ಹಾಗೂ ಜಲ ಮಂಡಳಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಜಲ ಮಂಡಳಿ ಎಇಇ ಜೀವನ್, ಪಾಲಿಕೆಯ ಅಧಿಕಾರಿಗಳಾದ ಲಕ್ಷ್ಮೀ, ಲೋಹಿತ್, ವಾರ್ಡ್ ಮೇಲ್ವಿಚಾರಕರಾದ ನೇತ್ರಾವತಿ ಉಪಸ್ಥಿತರಿದ್ದರು. ಉಳಿದಂತೆ ಮುಖಂಡರಾದ ಚಂದ್ರಪ್ಪ, ಫೋಟೋಗ್ರಾಫರ್ ಗಣೇಶ್, ಪತ್ರಕರ್ತ ಬಿ ರೇಣುಕೇಶ್,
ಹಿರಿಯ ಮುಖಂಡ ರಮೇಶ್ ಬಾಬು, ಆದರ್ಶ ನಿವಾಸಿಗಳ ಸಂಘದ ಕಾರ್ಯದರ್ಶಿ ಸಂತೋಷ್, ಖಜಾಂಚಿ ತಿಪ್ಪೇಸ್ವಾಮಿ, ಮಹಾಪೋಷಕರಾದ ಪೊಲೀಸ್ ಇಲಾಖೆಯ ಶಿವಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

