
shimoga | ಶಿವಮೊಗ್ಗ ನಗರದ ಕುಡಿಯುವ ನೀರು ವ್ಯವಸ್ಥೆ : ಸರ್ವಪಕ್ಷಗಳ ರಾಜಕಾರಣಿಗಳೇ ಗಮನಿಸಿ..?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾ. 1: ರಾಷ್ಟ್ರ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲಿ, ಶಿವಮೊಗ್ಗವೂ ಒಂದಾಗಿದೆ. ಆದರೆ ವಿಪಯಾರ್ಸದ ಸಂಗತಿ ಎಂದರೆ, ನಗರದ ಬೆಳವಣಿಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳು ಅಭಿವೃದ್ದಿಯಾಗುತ್ತಿಲ್ಲ. ಇದಕ್ಕೆ ನಗರದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ತಾಜಾ ನಿದರ್ಶನವಾಗಿದೆ!
‘ದೀಪದ ಬುಡದಲ್ಲಿ ಕತ್ತಲೆ’ ಎಂಬಂತೆ, ತುಂಗಾ ನದಿ ನಗರದ ಪಕ್ಕದಲ್ಲಿಯೇ ಹಾದು ಹೋಗಿದ್ದರೂ ಶಿವಮೊಗ್ಗ ನಾಗರೀಕರಿಗೆ ಕುಡಿಯುವ ನೀರಿನ ಹಾಹಾಕಾರ ಮಾತ್ರ ತಪ್ಪದಂತಾಗಿದೆ. ನಗರದ ಹೊರವಲಯದ ಅದೆಷ್ಟೊ ಬಡಾವಣೆಗಳಿಗೆ ಇಲ್ಲಿಯವರೆಗೂ ಕುಡಿಯುವ ನೀರಿನ ಸಂಪರ್ಕ ದೊರಕದಂತಾಗಿದೆ.
ಹಲವು ಪ್ರದೇಶಗಳಲ್ಲಿ ಹೊಸದಾಗಿ ಮನೆ ಕಟ್ಟುವವರು, ಬೋರ್’ವೆಲ್ ಕೊರೆಯಿಸುವುದು ಅನಿವಾರ್ಯವೆಂಬ ದುಃಸ್ಥಿತಿ ನಿರ್ಮಾಣವಾಗಿದೆ. ತುಂಗಾ ಜಲಾಶದಿಂದ ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದರೂ, ಅದೆಷ್ಟೊ ಬಡಾವಣೆಗಳ ನಾಗರೀಕರು ಕುಡಿಯುವ ನೀರಿನ ತತ್ವಾರದಿಂದ ಬಳಲುವಂತಾಗಿರುವುದು ಕೂಡ ಸತ್ಯದ ಸಂಗತಿಯಾಗಿದೆ.
ಬೆಳವಣಿಗೆ : ನಗರದ ಸರ್ವ ದಿಕ್ಕುಗಳಲ್ಲಿಯೂ, ಭಾರೀ ಪ್ರಮಾಣದಲ್ಲಿ ಜನವಸತಿ ಪ್ರದೇಶಗಳು ಬೆಳವಣಿಗೆಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ನಾನಾ ಕಾರಣಗಳ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿ ನೆಲೆಸುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಸಾರ್ವಜನಿಕ ಕುಡಿಯುವ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚಾಗುತ್ತಿದೆ.
ಆದರೆ ಇದಕ್ಕೆ ಅನುಗುಣವಾಗಿ ಕುಡಿಯುವ ನೀರು ಸೌಕರ್ಯದ ವ್ಯವಸ್ಥೆ ಬೆಳವಣಿಗೆಯಾಗಿಲ್ಲ. ಮತ್ತೊಂದೆಡೆ, ಕಳೆದ ಹಲವು ವರ್ಷಗಳಿಂದ 24*7 ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯಗತಗೊಂಡರೂ ನಗರದ ನೀರಿನ ಹಾಹಾಕಾರ ಸಮಸ್ಯೆ ಪರಿಹಾರವಾಗುವುದಿಲ್ಲವಾಗಿದೆ.
ಸೌಲಭ್ಯ ಕಲ್ಪಿಸಿಲಿ : ನಗರದ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನವಾಗಬೇಕಾಗಿದೆ. ಹೊಸದಾಗಿ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಬೇಕಾಗಿದೆ. ನಗರದಂಚಿನಲ್ಲಿರುವ ಜನವಸತಿ ಪ್ರದೇಶಗಳಿಗೆ, ಗ್ರಾಮಗಳಿಗೆ ತುಂಗಾ ಜಲಾಶಯದ ನೀರು ಪೂರೈಕೆಯಾಗುವ ವ್ಯವಸ್ಥೆ ಮಾಡಬೇಕಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಮೂಲಸೌಕರ್ಯ, ಸೌಂದರ್ಯಕ್ಕೆಂದೇ ನೂರಾರು ಕೋಟಿ ರೂ.ಗಳನ್ನು ವ್ಯಯಿಸಲಾಗಿತ್ತು. ಸದ್ಯ ಹಲವೆಡೆ ಹೇಳ ಹೆಸರಿಲ್ಲದಂತೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಳಾಗುತ್ತಿವೆ. ಆದರೆ ನಾಗರೀಕರಿಗೆ ಅತ್ಯಂತ ಅವಶ್ಯಕವಾದ ಕುಡಿಯುವ ನೀರು ಪೂರೈಕೆಗೆ ನಯಾಪೈಸೆ ಖರ್ಚು ಮಾಡಲಿಲ್ಲ.
ಬೇಕಾಬಿಟ್ಟಿಯಾಗಿ ವ್ಯಯಿಸಿದ ಹಣದಲ್ಲಿ, ಕೆಲ ಕೋಟಿ ರೂ. ವ್ಯಯಿಸಿದ್ದರೂ ನಗರದ ಲಕ್ಷಾಂತರ ನಾಗರೀಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುತ್ತಿತ್ತು. ಒಟ್ಟಾರೆ ಇನ್ನಾದರೂ ಜನಪ್ರತಿನಿಧಿಗಳು ಪಕ್ಷಬೇಧ ಮರೆತು, ಶಿವಮೊಗ್ಗ ನಗರದ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ ಎಂಬುವುದು ನಗರದ ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಿ
*** ಶಿವಮೊಗ್ಗ ನಗರದಲ್ಲಿ ಹಾಲಿಯಿರುವ ಕೃಷ್ಣ ರಾಜೇಂದ್ರ ನೀರು ಶುದ್ದೀಕರಣ ಘಟಕದ ಜೊತೆಗೆ, ಹೊಸದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕಾಗಿದೆ. ಇದು ಅತ್ಯಂತ ತುರ್ತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ತಂಡ ಪಕ್ಷಬೇಧ ಮರೆತು ಒಂದಾಗಬೇಕಾಗಿದೆ. ಮುಖ್ಯಮಂತ್ರಿಗಳು, ನಗರಾಭಿವೃದ್ದಿ, ಪೌರಾಡಳಿತ ಇಲಾಖೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಬೇಕು. ಸಾಧ್ಯವಾದರೆ ಪ್ರಸ್ತುತ ಬಜೆಟ್ ನಲ್ಲಿಯೇ, ತುಂಗಾ ಜಲಾಶಯದಿಂದ ಶಿವಮೊಗ್ಗ ನಗರಕ್ಕೆ ನೀರು ಪೂರೈಕೆ ಯೋಜನೆಗೆ ಅನುದಾನ ಲಭ್ಯವಾಗಿಸುವ ವ್ಯವಸ್ಥೆ ಮಾಡಬೇಕು ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
ಜೀವ ಕಳೆದುಕೊಂಡಿದ್ದ 24*7 ಕುಡಿಯುವ ನೀರು ಯೋಜನೆಗೆ ಮರು ಜೀವ!
*** ಶಿವಮೊಗ್ಗ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಅವ್ಯವಸ್ಥಿತವಾಗಿ ಅನುಷ್ಠಾನವಾಗುತ್ತಿರುವ 24*7 ಕುಡಿಯುವ ನೀರಿನ ಯೋಜನೆ, ಅಕ್ಷರಶಃ ಜೀವ ಕಳೆದುಕೊಂಡಿತ್ತು. ಈ ಹಿಂದಿನ ಜಲ ಮಂಡಳಿಯ ಕೆಲ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯಿಂದ ನಾಗರೀಕರು ತೊಂದರೆ ಪಡುವಂತಾಗಿತ್ತು. ಪ್ರಸ್ತುತ ಜಲ ಮಂಡಳಿಯ ಎಂಜಿನಿಯರ್ ಗಳಾದ ರವಿಕುಮಾರ್, ಮಿಥುನ್ ನೇತೃತ್ವದ ತಂಡವು, ಸದ್ದುಗದ್ದಲವಿಲ್ಲದೆ ನಿರ್ಜೀವವಾಗಿದ್ದ ಯೋಜನೆಗೆ ಮತ್ತೆ ಜೀವ ಕೊಡುವ ಕಾರ್ಯ ನಡೆಸುತ್ತಿದೆ. ನಗರದ ಹಲವೆಡೆ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಪುನಾರಾರಂಭಿಸಿದೆ. ವಿವಿಧೆಡೆ ನೀರು ಪೂರೈಕಗೂ ಕ್ರಮಕೈಗೊಂಡಿದೆ. ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ, ನಾಗರೀಕರಿಗೆ ನೆರವಾಗುವ ಕಾರ್ಯವನ್ನು ಸದರಿ ಎಂಜಿನಿಯರ್ ಗಳ ತಂಡ ಮಾಡಬೇಕಾಗಿದೆ.
Shimoga, Mar 1: Shimoga is one of the fastest growing second tier cities in the nation and state. But the sad fact is that the infrastructure is not being developed according to the growth and population of the city. The city’s drinking water supply system is a fresh example of this! Like ‘darkness at the foot of a lamp’, the Tunga river passes right next to the city, but the only problem is the scarcity of drinking water for the citizens of Shimoga. Even so many areas on the outskirts of the city have no access to drinking water till now.